ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದ ಕಾರಣ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದರು. ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಿಸಿದೆ.
ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಹೆಕ್ಟೇರಿಗೆ ಗರಿಷ್ಠ 15 ಸಾವಿರ ರೂ. ಪರಿಹಾರ ನೀಡಲಾಗುತ್ತಿದ್ದು, ಇದನ್ನು ಪಡೆಯಲು ರೈತರು ಜೂನ್ 16ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆಗೆ ಪಹಣಿ, ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಸ್ವಯಂ ದೃಢೀಕೃತ ಘೋಷಣಾ ಪತ್ರ ಅಗತ್ಯವಾಗಿರುತ್ತದೆ.
ಅನಾನಸ್, ಪಪ್ಪಾಯ, ಅಂಜೂರ, ಕಲ್ಲಂಗಡಿ, ಬಾಳೆ, ಕರಬೂಜ, ಬೂದಗುಂಬಳ, ಎಲೆಕೋಸು, ಹೂಕೋಸು, ಹಸಿರು ಮೆಣಸಿನಕಾಯಿ, ಟೊಮೇಟೊ ಬೆಳೆಗಳಿಗೆ ಈ ಪ್ಯಾಕೇಜು ನೀಡಲಾಗುತ್ತದೆ ಎಂದು ಶಿವಮೊಗ್ಗ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್. ಯೋಗೇಶ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಗರಿಷ್ಠ ಒಂದು ಹೆಕ್ಟೇರ್ ಗೆ ಪರಿಹಾರ ನೀಡುತ್ತಿದ್ದು, ಹೆಚ್ಚಿನ ಮಾಹಿತಿಗೆ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.