ಉಡುಪಿಯ ಈ ಪುಟ್ಟ ಪೋರಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬರೋಬ್ಬರಿ 15 ಮಾಸ್ಕ್ ಗಳನ್ನು ಹೊಲಿದುಕೊಟ್ಟಿದ್ದಾಳೆ.
ಅರೆ, ಇದರಲ್ಲೇನು ವಿಶೇಷವಿದೆ ಎನ್ನಿಸುತ್ತಿದೆಯೇ ? 15 ಮಾಸ್ಕ್ ಹೊಲಿದು ಕೊಡುವುದೂ ದೊಡ್ಡ ಸಂಗತಿಯೇ ? ಎಂದೆಲ್ಲಾ ಅನ್ನಿಸುತ್ತದೆಯೇ ? ಮುಂದೆ ಓದಿ, ನಿಮಗೇ ತಿಳಿಯುತ್ತದೆ.
ಹೆಸರು ಸಿಂಧೂರಿ. ಈಕೆಗಿನ್ನೂ 10 ವರ್ಷ. ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.
ಹುಟ್ಟಿನಿಂದಲೇ ಈಕೆಗೆ ಎಡಭಾಗದ ಎಡಗೈ ಊನಗೊಂಡಿದ್ದು, ಮೊಣಕೈಯಿಂದ ಮುಂಗೈವರೆಗೆ ಇಲ್ಲ. ಆದರೂ ಅಮ್ಮನ ಸಹಾಯದಿಂದ ಹೊಲಿಗೆಯಂತ್ರ ಬಳಸಿ 15 ಮಾಸ್ಕ್ ಗಳನ್ನು ಹೊಲಿದಿದ್ದಾಳೆ.
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿರುವ ಕನಿಷ್ಠ 1 ಲಕ್ಷ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸುವ ಗುರಿಯನ್ನು ಸ್ಕೌಟ್ ಅಂಡ್ ಗೈಡ್ ಹಾಕಿಕೊಂಡಿದ್ದು, ಈ ಗುರಿ ತಲುಪಲು ಕೈಜೋಡಿಸಿರುವ ಸಿಂಧೂರಿ ತನ್ನ ಅಳಿಲುಸೇವೆ ಸಲ್ಲಿಸಿದ ತೃಪ್ತಿ ವ್ಯಕ್ತಪಡಿಸಿದ್ದಾಳೆ.
ಆಕೆ ಹೊಲಿಗೆ ಯಂತ್ರದ ಮುಂದೆ ಕುಳಿತು ಮಾಸ್ಕ್ ಹೊಲಿಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಭಾರೀ ಮೆಚ್ಚುಗೆಗೂ ಪಾತ್ರವಾಗಿದೆ.