ಧಾರವಾಡ: ಕೊರೊನಾ ಭೀತಿಯಿಂದ ಶಾಲೆಗಳು ಬಂದ್ ಆಗಿದ್ದು, ಆನ್ ಲೈನ್ ಕ್ಲಾಸ್ ಗಳು ಆರಂಭವಾಗಿವೆ. ನಗರ ಪ್ರದೇಶಗಳಲ್ಲಿ ಆನ್ ಕ್ಲಾಸ್ ಗಳು ಸರಾಗವಾಗಿ ಸಾಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹಲವೆಡೆ ಇಂಟರ್ ನೆಟ್ ಸೌಲಭ್ಯಗಳಿಲ್ಲದೇ ಅನೇಕ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇಲ್ಲೊಬ್ಬ 2ನೇ ತರಗತಿ ವಿದ್ಯಾರ್ಥಿ ಟೀಚರ್ ಗೆ ಹೋಂ ವರ್ಕ್ ತೋರಿಸಲೆಂದು ಬರೋಬ್ಬರಿ 35 ಕಿ.ಮೀ. ಪ್ರಯಾಣಿಸಿದ್ದಾನೆ.
8 ವರ್ಷದ ಬಾಲಕ ಪವನ್ ಕಂಠಿ ಹೋಮ್ ವರ್ಕ್ ತೋರಿಸಿ, ಪಠ್ಯ ಪುಸ್ತಕಗಳನ್ನು ಪಡೆದುಕೊಂಡು ಹೋಗಲೆಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿಬೂದಿಹಾಳದಿಂದ ಹುಬ್ಬಳ್ಳಿಗೆ ಬಂದಿದ್ದಾನೆ.
ಬಾಲಕ ಪವನ್ ತಂದೆ-ತಾಯಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. 2ನೇ ತರಗತಿ ಓದುತ್ತಿರುವ ಪವನ್ ಗೆ ಆನ್ ಲೈನ್ ಕ್ಲಾಸ್ ಸೌಲಭ್ಯವಿಲ್ಲ. ಹೀಗಾಗಿ ಹುಬ್ಬಳ್ಳಿಯಲ್ಲಿರುವ ತನ್ನ ಶಿಕ್ಷಕಿ ಅನಸೂಯಾ ಅವರಿಗೆ ಹೋಂ ವರ್ಕ್ ತೋರಿಸಲು 35 ಕಿ.ಮೀ. ಪ್ರಯಾಣಿಸಿ ಬಂದಿದ್ದಾನೆ. ಕಳೆದ ತಿಂಗಳು ಟೀಚರ್ ಭೇಟಿಯಾಗಿದ್ದ ಪವನ್ ಗೆ ಒಂದಿಷ್ಟು ಹೋಂ ವರ್ಕ್ ನೀಡಿ ಮುಂದಿನ ತಿಂಗಳು ಬರುವಂತೆ ಹೇಳಿ ಕಳುಹಿಸಿದ್ದರು.