ಒಂದು ಮಳೆ ಬಂದ್ರೆ ಸಾಕು ಬೆಂಗಳೂರಿನ ರಸ್ತೆ ಅವಸ್ಥೆ ಹೇಗಿರುತ್ತೆ ಅನ್ನೋದು ಗೊತ್ತೇ ಇದೆ. ಮಳೆಯಿಂದಾಗಿ ಉಂಟಾದ ಗುಂಡಿಗಳಿಗೇನು ಬರ ಇರೋದಿಲ್ಲ. ಎಷ್ಟೋ ಜನ ಈ ಗುಂಡಿಗಳಿಗೆ ಬಲಿಯಾಗಿದ್ದಾರೆ. ಇನ್ನೊಂದಿಷ್ಟು ಜನ ಗುಂಡಿಗಳಿಂದ ಗಾಯಗಳನ್ನೂ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ನಮ್ಮದೇನು ತಪ್ಪಿಲ್ಲ ಅನ್ನೋ ರೀತಿ ಪಾಲಿಕೆ ವರ್ತಿಸುತ್ತಿತ್ತು. ಆದರೆ ಇನ್ಮುಂದೆ ಹಾಗಾಗಲ್ಲ. ರಸ್ತೆ ಗುಂಡಿಗಳಿಂದ ಅಪಘಾತವಾದರೆ ಪಾಲಿಕೆ ದಂಡ ತೆರಬೇಕು.
ಹೌದು, ಈ ವಿಚಾರವಾಗಿ ಹೈಕೋರ್ಟ್ ಪಾಲಿಕೆಗೆ ಚಾಟಿ ಬೀಸಿದೆ. ಹೈಕೋರ್ಟ್ ಏಟಿಗೆ ಎಚ್ಚೆತ್ತ ಬಿಬಿಎಂಪಿ ತನ್ನ ತಪ್ಪಿಗೆ ದಂಡ ತೆರಲು ಸಿದ್ಧವಾಗಿದ್ದು, ರಸ್ತೆ ಗುಂಡಿಯಿಂದ ಆಗುವ ಅಪಘಾತಗಳ ಸಂತ್ರಸ್ತರಿಗೆ 5 ಸಾವಿರದಿಂದ 3 ಲಕ್ಷ ರೂಪಾಯಿವರೆಗೆ ಪರಿಹಾರ ನೀಡಲು ಮುಂದಾಗಿದೆ. ಇದ್ರಿಂದ ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೆ ಒಳಗಾದವರು ಪರಿಹಾರ ಪಡೆಯಲು ಬಿಬಿಎಂಪಿ ಹೊಸ ಗೈಡ್‌ಲೈನ್ಸ್ ಪ್ರಕಟಿಸಿದ್ದು. ಫುಟ್ ಪಾತ್ ಗಳ ಎಡವಟ್ಟಿನಿಂದ ಗಾಯಗೊಂಡವರು ಪರಿಹಾರ ಪಡೆಯಬಹುದಾಗಿದೆ. ಸಣ್ಣಪುಟ್ಟ ಗಾಯಗಳಾದವರಿಗೆ 5 ಸಾವಿರ ರೂಪಾಯಿ, ಮೂರು ದಿನಗಳವರೆಗೆ ಚಿಕಿತ್ಸೆಗೆ ದಾಖಲಾದವರಿಗೆ 10 ರಿಂದ 15 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತದೆ.
ಇನ್ನು ರಸ್ತೆಗುಂಡಿಯಿಂದಾಗಿ ಆಗುವ ಅಪಘಾತದಲ್ಲಿ ಸಾವಿಗೀಡಾದವರಿಗೆ 3 ಲಕ್ಷ ಪರಿಹಾರ ನೀಡಬೇಕು. ಅಫಘಾತಕ್ಕೆ ಒಳಗಾದ ಸಂತ್ರಸ್ತರು ಪೊಲೀಸ್ ದೂರಿನೊಂದಿಗೆ ಬಿಬಿಎಂಪಿ ವಲಯ ಆಯುಕ್ತರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದ್ದು. ಸಾಕ್ಷಿಗಳಾಗಿ ಪೊಲೀಸ್ ದೂರು, ಪ್ರತ್ಯಕ್ಷದರ್ಶಿಯ ಹೇಳಿಕೆ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಗಣಿಸಿ ಪರಿಹಾರ ನೀಡಲಾಗುತ್ತದೆ. ಅಪಘಾತವಾದ ದಿನದಿಂದ 30 ದಿನಗಳ ಒಳಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆ ಮಾಡೋದು ಕಡ್ಡಾಯ ಎಂದು ಬಿಬಿಎಂಪಿ ಪ್ರಕಟಿಸಿದೆ.