ಬೆಳಗಾವಿ: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತಿನಲ್ಲಿ ಹುರುಳಿಲ್ಲ. ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ಅವರನ್ನು ಸಿಎಂ ಮಾಡಿದೆವಲ್ಲ ಅದು ದ್ರೋಹನಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾರೆ. ಕಣ್ಣೀರು ಹಾಕುವುದೇ ಅವರ ಮನೆಯ ಸಂಸ್ಕೃತಿ. ಒಲೈಕೆಗೋ, ಇನ್ಯಾರನ್ನೋ ನಂಬಿಸಲು ಕಣ್ಣೀರು ಹಾಕ್ತಾರೆ. ಹೆಚ್.ಡಿ.ಡಿ. ಬೇರೆ ಯಾರನ್ನೂ ಬೆಳೆಸಲ್ಲ, ಅವರ ಕುಟುಂಬದವರನ್ನು ಬೆಳೆಸುತ್ತಾರೆ ಅಷ್ಟೇ ಎಂದು ಕಿಡಿಕಾರಿದರು.
ಹೆಚ್.ಡಿ. ಕುಮಾರಸ್ವಾಮಿಗೆ ಸಿಎಂ ಹುದ್ದೆ ನೀಡಿದರೆ ಅವರು ವೆಸ್ಟರ್ನ್ ಹೋಟೆಲ್ ತಾಜ್ ನಲ್ಲಿ ಕುಳಿತು ಅಧಿಕಾರ ನಡೆಸಿದರು. ಶಾಸಕರ ಕೈಗೆ ಸಿಗದೇ ಅವರ ಕಷ್ಟ ಆಲಿಸದೇ, ಅವರಿಗೆ ಸಹಕಾರ ನೀಡದೇ ಅಧಿಕಾರ ನಡೆಸಲು ಮುಂದಾದರು. ಅದಕ್ಕೆ ಸರ್ಕಾರ ಬಿದ್ದು ಹೋಯ್ತು. ಕುಮಾರಸ್ವಾಮಿ ಮಾತಲ್ಲಿ ಸತ್ಯಾಂಶವಿಲ್ಲ. ಅವರಿಗೆ ಗೌರವ ಇದ್ದರೆ ತಾನೇ ಹಾಳಾಗೋಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.