ಬೆಂಗಳೂರು: ಡ್ರಗ್ಸ್ ಜಾಲದಿಂದ ಬಂದ ಹಣದಿಂದ ಬಿಜೆಪಿಯವರು ಮೈತ್ರಿ ಸರ್ಕಾರವನ್ನು ಬೀಳಿಸಿದ್ದರು ಎಂಬ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಕುಮಾರಸ್ವಾಮಿ ಮತ್ತಿನಲ್ಲಿ ಮಾತನಾಡಿರಬೇಕು. ಅವರನ್ನು ತಪಾಸಣೆಗೊಳಪಡಿಸಬೇಕು ಎಂದು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಕುಮಾರಸ್ವಾಮಿ ಮತ್ತಲ್ಲಿ ಹೇಳಿಕೆ ನೀಡಿದ್ದಾರಾ ಅಥವಾ ಸರಿಯಾಗಿದ್ದಾಗಲೇ ಹೇಳಿಕೆ ನೀಡಿದ್ದಾರಾ ಎಂಬ ಬಗ್ಗೆ ಮೊದಲು ಪರೀಕ್ಷೆ ನಡೆಸಬೇಕು. ಅವರೇ ಮುಖ್ಯಮಂತ್ರಿಯಾಗಿದ್ದ ಆ ಸಂದರ್ಭದಲ್ಲಿ ಡ್ರಗ್ಸ್ ಜಾಲವನ್ನು ನಿಯಂತ್ರಿಸಲಾಗದಷ್ಟು ಅವರು ದುರ್ಬಲ ಸಿಎಂ ಆಗಿದ್ದರೇ ಎಂದು ಪ್ರಶ್ನಿಸಿದ್ದಾರೆ.
ಡ್ರಗ್ಸ್ ಹಣದಿಂದ ಸರ್ಕಾರ ಬೀಳಿಸಿದರು ಎಂದು ಇಂದು ಆರೋಪಿಸುತ್ತಿದ್ದಾರೆ. ಅಂದರೆ ಅವರ ಅಧಿಕಾರದ ಅವಧಿಯಲ್ಲಿ ಇಂಟಲಿಜನ್ಸ್ ಅಷ್ತು ದುರ್ಬಲವಾಗಿತ್ತೇ? ಸಿಎಂ ಆಗಿದ್ದ ಅವರು ಅಷ್ತು ದುರ್ಬಲ ಸಿಎಂ ಆಗಿದ್ದರೇ? ಅವರ ಸಂಪುಟ ಸಚಿವರೇ ರಾಜೀನಾಮೆ ನೀಡಿ ಬಂದಿದ್ದರು ಎಂಬುದು ಅವರಿಗೆ ಗೊತ್ತಿದೆ. ರಾಜಕೀಯ ಪ್ರಚಾರಕ್ಕಾಗಿ ಕುಮಾರಸ್ವಾಮಿ ಇಂತಹ ಆರೋಪ ಮಾಡುವುದು ಸರಿಯಲ್ಲ ಎಂದು ಗುಡುಗಿದರು.
ಇನ್ನು ಡ್ರಗ್ಸ್ ಮಾಫಿಯಾ ಇಂದು ನಿನ್ನೆಯದಲ್ಲ. ಅದಕ್ಕೆ ಕಡಿವಾಣ ಹಾಕುವ ಇಚ್ಛಾ ಶಕ್ತಿಯೂ ನಮ್ಮ ಸರ್ಕಾರಕ್ಕಿದೆ ಎಂದು ಹೇಳಿದರು.