ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಇದೀಗ ಮಾಜಿ ಸಚಿವ ಸಾ.ರಾ.ಮಹೇಶ್ ಕಿಡಿಕಾರಿದ್ದು, ಹುಟ್ಟೂರಲ್ಲೇ ಗೆಲ್ಲದ ಯೋಗೇಶ್ವರ್ ಕ್ಷೇತ್ರ ಗೆಲ್ಲಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಸರಣಿ ಟ್ವಿಟ್ ಮೂಲಕ ಗುಡುಗಿರುವ ಮಹೇಶ್, ಮುಂದಿನ ದಿನಗಳಲ್ಲಿ ಎಚ್‌ಡಿಕೆಯನ್ನು ಚನ್ನಪಟ್ಟಣದಿಂದ ಹೊರಹಾಕುತ್ತೇನೆ ಎಂಬ ಯೋಗೇಶ್ವರ್ ಮಾತು ವಾಸ್ತವವೇ? ಯೋಗೇಶ್ವರ್ ಲೀಲೆಗಳು ಅಲ್ಲಿನ ಜನರಿಗೆ ಮನದಟ್ಟಾಗಿವೆ. ಸಿ.ಡಿ.ಯಿಂದಲೋ, ಫೋಟೊಗಳಿಂದಲೋ ಬಿಜೆಪಿ ಪರಿಷತ್ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿ ಎಂದು ಹೇಳಿದ್ದಾರೆ.
ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ: ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ತಿರುಗೇಟು
ಚನ್ನಪಟ್ಟಣದ ಚಕ್ಕೆರೆ ‘ಸರ್ವಪಕ್ಷ ಸದಸ್ಯ’ ಯೋಗೇಶ್ವರ್ ಹುಟ್ಟೂರು. ಯಾವುದೇ ನಾಯಕನಿಗೆ ಹುಟ್ಟೂರಿನಲ್ಲಾದರೂ ಮರ್ಯಾದೆ ಇರುತ್ತದೆ. ಆದರೆ, ಯೋಗೇಶ್ವರ್ ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ. ಮೊನ್ನೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಇಡೀ ಚಕ್ಕೆರೆ ಗ್ರಾಮ ಪಂಚಾಯಿತಿ ಜೆಡಿಎಸ್ ಬೆಂಬಲಿಸಿದೆ. ಈ ನೋವು ಆವರನ್ನು ಕಾಡುತ್ತಿರಬಹುದು ಎಂದಿದ್ದಾರೆ.
ಇನ್ನು ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಮೈತ್ರಿ ವಿಚಾರವಾಗಿ ಮಾತನಾಡಿರುವ ಅವರು, ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಆಗಲು ಜಿಟಿಡಿ, ಸಂದೇಶ್ ನಾಗರಾಜ್ ಕಾರಣ. ಬಿಜೆಪಿಗೆ ಸಂದೇಶ್ ನಾಗರಾಜು-ಜಿಟಿಡಿ ಬೆಂಬಲ ನೀಡ್ತಾರೆ ಅಂತ ಗೊತ್ತಾಯ್ತು, ಹೀಗಾಗಿ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ್ವಿ. ಜೆಡಿಎಸ್ ಇಲ್ಲದೆ ರಾಜ್ಯದಲ್ಲಿ ನಿಮ್ಮ ನಡೆ ಇಲ್ಲ, ಸಿದ್ದರಾಮಯ್ಯನವರ ತವರು ಜಿಲ್ಲೆಯಲ್ಲೇ ನಮ್ಮ ಶಕ್ತಿ ತೋರಿಸಿದ್ದೇವೆ ಮುಂದಿನ ವರ್ಷವೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರೆಯುತ್ತದೆ ಮುಂದಿನ ವರ್ಷ ಕಾಂಗ್ರೆಸ್ ಗೆ ಮೈಸೂರು ಮೇಯರ್ ಸ್ಥಾನ, ಕೊಟ್ಟ ಮಾತಿಗೆ ನಾವು ಯಾವತ್ತು ತಪ್ಪುವುದಿಲ್ಲ ಎಂದು ಹೇಳಿದ್ದಾರೆ.