
ಕೊರೊನಾದಿಂದಾಗಿ ಶಾಲೆಗಳನ್ನು ಇನ್ನು ತೆರೆದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಶಾಲೆ ತೆರೆಯುವ ಯೋಚನೆ ಕೂಡ ಇಲ್ಲ. ಹೀಗಾಗಿ ಮಕ್ಕಳಿಗೆ ಶೈಕ್ಷಣಿಕವಾಗಿ ಸಮಸ್ಯೆಯಾಗಬಾರದೆಂದು ಆನ್‌ಲೈನ್ ತರಗತಿಗಳನ್ನು ಮಾಡಲಾಗುತ್ತಿದೆ.
ಆನ್‌ಲೈನ್ ತರಗತಿ ಮಾಡುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಆನ್‌ಲೈನ್ ತರಗತಿಗಳಿಂದ ಹಳ್ಳಿ ಭಾಗದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಶ್ರೀಮಂತರೇನೋ ಮೊಬೈಲ್‌ಗಳನ್ನು ಮಕ್ಕಳಿಗೆ ಕೊಡಿಸಿದ್ದಾರೆ. ಆದರೆ ಬಡ ಮಕ್ಕಳಿಗೆ ಮೊಬೈಲ್ ಸಮಸ್ಯೆ ಆಗುತ್ತಿದೆ.
ಇದು ಒಂದು ಕಡೆ ಸಮಸ್ಯೆ ಅಲ್ಲ. ತುಂಬಾ ಹಳ್ಳಿಗಳಲ್ಲಿ ಇದೇ ರೀತಿಯ ಸಮಸ್ಯೆ ಉಂಟಾಗಿದೆ. ಇನ್ನು ಬೆಳಗಾವಿ ಜಿಲ್ಲೆಯ ಘಟಪ್ರಭಾ ಸುತ್ತಮುತ್ತ ಇರುವ ಹಳ್ಳಿಯ ಮಕ್ಕಳಿಗೂ ಕೂಡ ಇದೇ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಘಟಪ್ರಭಾದ ಗುಬ್ಬಲಗುಡ್ಡದ ಕೆಂಪಯ್ಯಸ್ವಾಮಿ ಮಠದ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು 10 ಬಡ ವಿದ್ಯಾರ್ಥಿಗಳಿಗೆ ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳನ್ನು ನೀಡಿದ್ದಾರೆ.
ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಮಕ್ಕಳಿಗೆ ಮೊಬೈಲ್ ಗಿಫ್ಟ್ ಆಗಿ ನೀಡುವ ಮೂಲಕ ಅನೇಕ ಮಕ್ಕಳ ಶಿಕ್ಷಣಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ. ಮಕ್ಕಳಿಗೆ ಶಿಕ್ಷಣ ವಿಚಾರದಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮೊಬೈಲ್ ಕೊಡಿಸಿದ್ದೇವೆ. ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದ್ದಾರೆ.