ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದು, ಇದರ ಮಧ್ಯೆಯೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ.
ಅದರಲ್ಲೂ ಈ ಸೋಂಕು ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳಿಗೆ ಮಾರಕವಾಗಬಹುದೆಂದು ಹೇಳಲಾಗಿದ್ದು, ಹೀಗಾಗಿ ಇವರುಗಳು ಮನೆಯಿಂದ ಹೊರ ಬಾರದಿರುವುದು ಸೂಕ್ತ ಎಂದು ತಿಳಿಸಲಾಗಿತ್ತು.
ಆದರೆ ಹಿರಿಯ ನಾಗರಿಕರು ಮನೆಯಿಂದ ಹೊರಗೆ ಬರಬಾರದೆಂಬ ಸೂಚನೆಯನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಅದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಸೋಂಕು ತಡೆಯಲು 65 ವರ್ಷ ಮೇಲ್ಪಟ್ಟವರು, ಮಕ್ಕಳು ಮತ್ತು ಗರ್ಭಿಣಿಯರು ಮನೆಗಳಿಂದ ಹೊರಗೆ ಬಾರದಂತೆ ಸಲಹೆ ನೀಡಲಾಗಿದೆಯಷ್ಟೇ ಹೊರತು ಇದನ್ನು ಕಡ್ಡಾಯಗೊಳಿಸಿಲ್ಲ ಎಂದು ತಿಳಿಸಿದೆ.