ಹಿಡ್ಲುಮನೆ ಫಾಲ್ಸ್ ನೋಡಲೆಂದು ತೆರಳಿ ಕಲ್ಲುಗಳ ಮಧ್ಯೆ ಅಪಾಯದಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯನ್ನು ಸತತ 5 ಗಂಟೆಗಳ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ.
ಕೊಡಚಾದ್ರಿ ಪ್ರವಾಸಕ್ಕೆಂದು ಹಾಸನ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮೋಘ, ಆತನ ಸ್ನೇಹಿತರಾದ ತಮಿಳುನಾಡು ಮೂಲದ ಸಂಜೀವ್, ಜೈಪುರದ ಮಧು ಎಂಬುವವರು ಹಿಡ್ಲುಮನೆ ಫಾಲ್ಸ್ ನೋಡಲೆಂದು ತೆರಳಿದ್ದಾರೆ. ಮೂವರೂ ಫಾಲ್ಸ್ ಕೆಳಗಿನಿಂದ ಮೇಲ್ಭಾಗಕ್ಕೆ ಹತ್ತಿದ್ದಾರೆ.
ಫಾಲ್ಸ್ ಪಕ್ಕದಲ್ಲಿ ಕೆಳಗಿಳಿಯಲೆಂದು ಹೋದ ಅಮೋಘ ಸುಮಾರು 80 ಅಡಿ ಎತ್ತರದಲ್ಲಿ ಫಾಲ್ಸ್ ನ ಮೇಲ್ಭಾಗದಲ್ಲಿ ಸಿಲುಕಿಕೊಂಡಿದ್ದ. ಅಮೋಘ ಅಪಾಯಕ್ಕೆ ಸಿಲುಕಿದ್ದನ್ನು ಗಮನಿಸಿದ ಇಬ್ಬರು ಸ್ನೇಹಿತರು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಸ್ಥಳೀಯರು ಹಾಗೂ ಪ್ರವಾಸಿಗರಿಂದ ಅಮೋಘನನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಲಾಗಿದೆ.
ಇದೀಗ ಅಗ್ನಿಶಾಮಕ ಸಿಬ್ಬಂದಿ, ವನ್ಯಜೀವಿ ಅರಣ್ಯ ಸಿಬ್ಬಂದಿ ಸೇರಿದಂತೆ 50ಕ್ಕೂ ಹೆಚ್ಚು ಜನರ ತಂಡ 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಮೋಘನನ್ನು ರಕ್ಷಿಸಿದ್ದಾರೆ.