ಬೆಳಗಾವಿ: ಬಿಜೆಪಿ ಸೇರುವ ಬಗ್ಗೆ ನಾನು ಎಲ್ಲಿಯೂ ಚರ್ಚೆ ನಡೆಸಿಲ್ಲ. ನನ್ನ ಹೊಲ ಬಿಟ್ಟು ಕೂಡ ನಾನು ಎಲ್ಲೂ ಹೋಗಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲ್ಕರ್ಣಿ ತಿಳಿಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕುಲ್ಕರ್ಣಿ, ಬಿಜೆಪಿ ಸೇರುವ ಬಗ್ಗೆ ಚರ್ಚೆಯೇ ನಡೆದಿಲ್ಲ. ಅನಗತ್ಯ ಸುದ್ದಿಗಳು ಹರಡುತ್ತಿವೆ. ಸಚಿವ ರಮೇಶ್ ಜಾರಕಿಹೊಳಿ ನನಗೆ ಬಿಜೆಪಿಗೆ ಬರುವಂತೆ ಕರೆದರು. ಆದರೆ ನಾನು ಎಲ್ಲರ ಮುಂದೆ ಅವರಿಗೆ ಕೈಮುಗಿದು ನಮಸ್ಕರಿಸಿಬಿಟ್ಟೆ ಎಂದು ತಿಳಿಸಿದರು.
ಹಲವು ದಿನಗಳಿಂದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲ್ಕರ್ಣಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಈ ಬಗ್ಗೆ ಬಿಜೆಪಿ ನಾಯಕರು ಅಂತಹ ಯಾವುದೇ ವಿಚಾರದ ಬಗ್ಗೆ ನಮಗೆ ತಿಳಿದಿಲ್ಲ ಎಂದಿದ್ದರು. ಇದೀಗ ಇದೇ ವಿಚಾರವಾಗಿ ಸ್ಪಷ್ಟ ಪಡಿಸಿರುವ ವಿನಯ್ ಕುಲ್ಕರ್ಣಿ ತಾವು ಬಿಜೆಪಿ ಸೇರುವ ಚರ್ಚೆಯೇ ನಡೆದಿಲ್ಲ ಎಂದಿದ್ದಾರೆ.