ಚುನಾವಣೆ ಎಂದರೆ ಹಣ – ಹೆಂಡ ಹಂಚುವುದು ಎಂಬಂತಾಗಿದೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲೂ ಮತದಾರರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದೆಲ್ಲದರ ಮಧ್ಯೆ ಈ ಸುದ್ದಿ ವಿಭಿನ್ನವಾಗಿದೆ.
ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಈ ಘಟನೆ ನಡೆದಿದ್ದು, ಇಂದು ನಡೆಯುತ್ತಿರುವ ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ ಮುನ್ನಾ ದಿನ ಅಂದರೆ ಶುಕ್ರವಾರದಂದು ವ್ಯಕ್ತಿಯೊಬ್ಬರು ತ್ರಿಪುರಾಂತ ಗ್ರಾಮಕ್ಕೆ ಹಣ ಹಂಚಲು ಬಂದಿದ್ದಾರೆ.
ಈ ಸಂದರ್ಭದಲ್ಲಿ ಅವರನ್ನು ಹಿಡಿದ ಗ್ರಾಮಸ್ಥರು, ರಾಜಕೀಯ ಪಕ್ಷಗಳೇ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿವೆ ಎಂದು ಆರೋಪಿಸಿದ್ದಲ್ಲದೇ ವ್ಯಕ್ತಿಗೆ ಚಪ್ಪಲಿಯೇಟು ನೀಡಿದ್ದಾರೆ. ಜೊತೆಗೆ ಹಣವನ್ನು ಗಾಳಿಗೆ ತೂರಿದ್ದಾರೆ.
ಬಳಿಕ ಚುನಾವಣಾ ವೀಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈತ ಯಾವ ಪಕ್ಷದ ಅಭ್ಯರ್ಥಿ ಪರ ಹಣ ಹಂಚಲು ಬಂದಿದ್ದ ಎಂಬುದು ತಿಳಿದುಬಂದಿಲ್ಲ.