ಎಷ್ಟೋ ಬಾರಿ ಜೀ ಮೈಲ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಖಾತೆಗಳ ಹ್ಯಾಕ್ ಮಾಡೋದು. ನಕಲಿ ಮಾಡೋದು ಹೊಸದೇನಲ್ಲ. ಈ ರೀತಿ ಮಾಡಿದ ನಕಲಿ ಖಾತೆಗಳಿಂದ ಅವಾಂತರಗಳು ಆಗಿರುವುದನ್ನು ನೋಡಿದ್ದೇವೆ. ಇದೀಗ ವಾಟ್ಸಾಪ್ ಖಾತೆ ನಕಲಿ ಮಾಡಿ ಹಣ ಪೀಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು, ಪಶ್ಚಿಮ ಬಂಗಾಳ ಮೂಲದ ಶಮೀರ್ ಕುಮಾರ್ ಎಂಬಾತ ಮಹಿಳೆಯೊಬ್ಬರ ಮೊಬೈಲ್ ನಂಬರ್ ಬಳಸಿದ್ದಾನೆ. ಆ ನಂಬರ್‌ನಿಂದ ವಾಟ್ಸಾಪ್ ಖಾತೆ ಕ್ರಿಯೇಟ್ ಮಾಡಿ ಮಹಿಳೆಯ ಸ್ನೇಹಿತರ ಮುಂದೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈತ ತಾಯಿಗೆ ಆರೋಗ್ಯ ಸರಿಯಿಲ್ಲ ಎಂಬ ಕಾರಣವೊಡ್ಡಿ ಈ ಕೆಲಸ ಮಾಡಿದ್ದಾನೆ. ಈತ ವಾಟ್ಸಾಪ್ ನಕಲಿ ಮಾಡಿದ್ದಾನೆಂದು ತಿಳಿಯದ ಸ್ನೇಹಿತರೊಬ್ಬರು ಖಾತೆಗೆ 6 ಸಾವಿರ ಹಣ ಜಮಾ ಮಾಡಿದ್ದಾರೆ. ನಂತರ ಹಣ ಬಂತಾ ಎಂಬುದನ್ನು ತಿಳಿಯಲು ಕರೆ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಇನ್ನು ಈ ಪ್ರಕರಣ ಸಂಬಂಧ ಮಹಿಳೆ, ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಶಮೀರ್ ಕುಮಾರ್‌ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.