ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆ ಹಗರಣವನ್ನು ಈಗಿನ ಬಿಜೆಪಿ ಸರ್ಕಾರ ಮುಚ್ಚಿ ಹಾಕುವ ಹುನ್ನಾರ ನಡೆಸಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಜಪೇಯಿ ಬಡಾವಣೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಗಾಗಿ ಲೋಕಾಯುಕ್ತಕ್ಕೆ ವಹಿಸಲಾಗಿತ್ತು. ಈಗ ಲೋಕಾಯುಕ್ತ ವರದಿ ಬಿಡುಗಡೆಯಾಗಿದ್ದು, ನಿವೇಶನ ಹಂಚಿಕೆಯಲ್ಲಿ ಹಗರಣ ಆಗಿರುವುದು ಸಾಬೀತು ಆಗಿದೆ. ನಿಯಮಗಳನ್ನು ಮೀರಿ ನಿವೇಶನ ಹಂಚಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ವರದಿಯನ್ನು ಇನ್ನೇನು ಸರ್ಕಾರಕ್ಕೆ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಈಗಿನ ಬಿಜೆಪಿ ಸರ್ಕಾರ ಲೋಕಾಯುಕ್ತ ತನಿಖೆ ವಾಪಾಸ್ ಪಡೆದು ಅದನ್ನು ಮುಚ್ಚಿಹಾಕುವ ಹುನ್ನಾರ ನಡೆಸಿದೆ ಎಂದರು.
ಇತ್ತೀಚೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್ ಅವರು ಸಹ ವಾಜಪೇಯಿ ಬಡಾವಣೆಯ ನಿವೇಶನಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ರದ್ದುಪಡಿಸಿ ಅರ್ಜಿದಾರರಿಗೆ ನಿವೇಶನ ನೀಡುತ್ತೇವೆ ಎಂದಿದ್ದಾರೆ. ಅಂದರೆ ಈ ಹಗರಣವನ್ನು ಇಲ್ಲಿಗೆ ಮುಚ್ಚಿ ಹಾಕುವ ಯೋಚನೆ ಇದಾಗಿದೆ. ಹೀಗಾಗಬಾರದು. ಲೋಕಾಯುಕ್ತ ವರದಿ ಸರ್ಕಾರಕ್ಕೆ ಸಲ್ಲಿಸಬೇಕು. ಅದರ ಆಧಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ನಿಜವಾದ ಫಲಾನುಭವಿಗಳಿಗೆ ನಿವೇಶನ ಸಿಗಬೇಕು ಎಂದರು.
ಈಗಾಗಲೇ ವರದಿಯಲ್ಲಿ ಬೆಚ್ಚಿ ಬೀಳುವ ಸಂಗತಿಗಳು ಬಯಲಾಗಿವೆ. ಬಿಜೆಪಿ ಕಾರ್ಯಕರ್ತರಿಗೆ, ಶ್ರೀಮಂತರಿಗೆ, ಮನೆ ಇದ್ದವರಿಗೆ, ವಿವೇಚನಾ ಕೋಟಾದಡಿ 142 ಮಂದಿಗೆ, ಪ್ರಾಧಿಕಾರದ ಸಿಬ್ಬಂದಿಗಳಿಗೆ, ಒಂದೇ ಕುಟುಂಬದ ಹಲವರಿಗೆ, ಅಪ್ರಾಪ್ತರಿಗೆ,ವಿಳಾಸವೇ ಇಲ್ಲದವರಿಗೆ, ಸರ್ಕಾರಿ ನೌಕರರಿಗೆ ಹೀಗೆ ನಿಯಮಗಳನ್ನು ಉಲ್ಲಂಘನೆ ಮಾಡಿ ಕೊಟ್ಯಂತರ ರೂ.ಬೆಲೆ ಬಾಳುವ ಸಾವಿರಕ್ಕು ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ವಿತರಿಸಿರುವುದು ಬಟಾಬಯಲಾಗಿದೆ. ಲೋಕಾಯುಕ್ತ ತನಿಖೆ ಪ್ರಕಾರ ಎಸ್.ಜ್ಞಾನೇಶ್ವರ್ ಮತ್ತು ಎಸ್.ದತ್ತಾತ್ರಿಯವರ ಕಾಲಾವಧಿಯಲ್ಲಿ ಈ ಹಗರಣ ನಡೆದಿದೆ.ಇದರ ಹಿಂದೆ ಸಚಿವ ಕೆ.ಎಸ್.ಈಶ್ವರಪ್ಪನವರ ಕೈವಾಡ ಇದೆ. ತಮ್ಮ ಬೆಂಬಲಿಗರನ್ನು ಹಗರಣದಿಂದ ರಕ್ಷಿಸುವ ಪ್ರಯತ್ನವೇ ಇದಾಗಿದೆ ಎಂದರು.
ಈ ಹಗರಣವನ್ನು ಕೈಬಿಟ್ಟರೆ ಕಾಂಗ್ರೆಸ್ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ. ನ್ಯಾಯಾಲಯದ ಹೋರಾಟಕ್ಕೂ ನಾವು ಸಿದ್ದರಿದ್ದೇವೆ. ಸಚಿವರು ಸ್ವಜನಪಕ್ಷಪಾತ ಬಿಟ್ಟು ಕೂಡಲೇ ಲೋಕಾಯುಕ್ತ ತನಿಖಾ ವರದಿಯನ್ನು ಆಧರಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನ್ಯಾಯಮೂರ್ತಿ ರವೀಂದ್ರನಾಥ್ ಹಾಗೂ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದ ನಂತರವೂ ತನಿಖೆ ರದ್ದುಪಡಿಸುವುದಾಗಿ ನಗರಾಭಿವೃದ್ಧಿ ಸಚಿವರು ಹೇಳಿಕೆ ನೀಡುತ್ತಾರೆ ಎಂದರೇ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬೆಂಬಲಿಸುತ್ತಿರುವ ಅನಾಚಾರಗಳಿಗೆ ಬೇರೆ ಪುರಾವೆಗಳ ಅಗತ್ಯವೇ ಇರುವುದಿಲ್ಲ ಎಂದ ಅವರು, ಕೂಡಲೇ ತನಿಖಾ ವರದಿಯನ್ನಾಧರಿಸಿ ಹಗರಣದ ಆರೋಪಿಗಳ ಮೇಲೆ ಕೇಸು ದಾಖಲಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.