ಬೆಳಗಾವಿ: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ, ಪಕ್ಷದಲ್ಲಿನ ನಾಯಕರ ನಡೆ ನೋಡಿ ನನಗೆ ಬೇಸರವಾಗಿ ರಾಜಕೀಯವೇ ಬೇಡವೆನಿಸಿದೆ ಎಂದು ಹೇಳಿದ್ದಾರೆ.
ಕೃಷ್ಣಾ ನದಿಗೆ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಟೆಂಡರ್ ಪೂರ್ಣಗೊಂಡಿದ್ದರೂ ಕಾಮಗಾರಿಯನ್ನೇ ಆರಂಭಿಸಿಲ್ಲ. ಅನುದಾನ ಬಿಡುಗಡೆ ವಿಚಾರವಾಗಿ 44 ಕೋಟಿ ರೂ. ತಡೆ ಹಿಡಿದ ಬಗ್ಗೆ ಖುದ್ದು ಭೇಟಿಯಾಗಿ ವಿವರಿಸಿದರೂ ಸಿದ್ದರಾಮಯ್ಯ ಇದಾವುದರ ಬಗ್ಗೆಯೂ ಚಕಾರವೆತ್ತಿಲ್ಲ. ತಮ್ಮ ಕ್ಷೇತ್ರ ಬಾದಾಮಿಗೆ ಅನುದಾನ ಬೇಕಾದಾಗ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದು ಅನುದಾನ ಪಡೆದುಕೊಂಡರು. ಇದೆಲ್ಲವನ್ನು ನೋಡಿ ನನಗೆ ಬೇಸರವಾಗಿದೆ ಎಂದರು.
ನಾನು ರಾಜಕೀಯದಲ್ಲಿದ್ದರೂ ಅಷ್ಟೇ, ಇಲ್ಲದಿದ್ದರೂ ಅಷ್ಟೇ ಎನ್ನುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ನನಗೆ ರಾಜಕಾರಣ ಬೇಕಾಗಿಲ್ಲ. ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಏನು ಮಾಡಿದ್ದಾರೆ? ನಾನು ಎರಡು ಬಾರಿ ಸ್ಪರ್ಧಿಸಿದಾಗಲೂ ಕ್ಷೇತ್ರದಲ್ಲಿ ಲೀಡ್ ನೀಡಲೂ ಸಾಧ್ಯವಾಗಿಲ್ಲ. ಅವರು ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.