ಅಲೆಮಾರಿ ಸಮುದಾಯ ವ್ಯಾಪಾರಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡುತ್ತಿರುತ್ತದೆ. ಹೀಗಾಗಿ ಇವರುಗಳು ಒಂದೆಡೆ ನೆಲೆ ನಿಲ್ಲುವುದು ಸಾಧ್ಯವಾಗುವುದಿಲ್ಲ. ಇದೀಗ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯ ತಮಗೆ ಅನುಕೂಲವಾಗುವ ಊರಿನಲ್ಲಿ ಶಾಶ್ವತವಾಗಿ ನೆಲೆಸುವ ಕಾರ್ಯಕ್ಕೆ ಮುಂದಾಗಿದ್ದು, ಇವರುಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.
ಹೌದು, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಕ್ಕೆ ದೇವರಾಜ ಅರಸು ವಸತಿ ನಿಗಮದಿಂದ 69,000 ಮನೆಗಳನ್ನು ನಿರ್ಮಿಸಿಕೊಡಲು ರಾಜ್ಯ ಸರ್ಕಾರ ಮುಂದಾಗಿದ್ದು, ವಸತಿ ಸಚಿವ ವಿ. ಸೋಮಣ್ಣ ಬೆಂಗಳೂರಿನಲ್ಲಿ ಈ ವಿಷಯ ತಿಳಿಸಿದ್ದಾರೆ. ಇದಕ್ಕಾಗಿ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪ್ರತಿ ಮನೆಗೆ 1.2 ಲಕ್ಷ ರೂ. ಅನುದಾನ ಒದಗಿಸಲಿದ್ದು, ನಾಲ್ಕು ಕಂತುಗಳಲ್ಲಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನು 20 ರಿಂದ 25 ದಿನಗಳಲ್ಲಿ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗುತ್ತದೆ ಎಂದು ಸಚಿವ ಸೋಮಣ್ಣ ಮಾಹಿತಿ ನೀಡಿದ್ದಾರೆ.