ಮೈಸೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರ ಕುಟುಂಬ ರಾಜಕಾರಣ ನಡೆಯುತ್ತಿದೆ. ತಮ್ಮ ಕುಟುಂಬದವರಿಗಾದರೆ ಹಣ ಕೇಳಿದ ತಕ್ಷಣ ಅನುದಾನವನ್ನೇ ಬಿಡುಗಡೆ ಮಾಡುತ್ತಾರೆ. ಆದರೆ ಕ್ಷೇತ್ರದ ಅಭಿವೃದ್ಧಿಗೆ ಕೇಳಿದರೆ ಹಣವೇ ಇಲ್ಲ ಎನ್ನುತ್ತಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಶಾಸಕ ಹೆಚ್.ಪಿ.ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಂತ ಜಮೀನಿನ ಕೆಲಸಕ್ಕೂ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಸಿಎಂ ಬಿ ಎಸ್ ವೈ ತಂಗಿಯ ಪುತ್ರ ಅಶೋಕ್ ಅವರದ್ದು 16 ಎಕರೆ ಫಾರ್ಮ್ ಹೌಸ್ ಇದೆ. ಕೆರೆಗಳನ್ನು ಒತ್ತುವರಿ ಮಾಡಿ ಫಾರ್ಮ್ ಹೌಸ್ ಮಾಡಲಾಗಿದೆ. ಈ ಫಾರ್ಮ್ ಹೌಸ್ ಗೆ ಹೋಗಲು ರಸ್ತೆ ನಿರ್ಮಾಣಕ್ಕೆ ಕೆರೆ ಕಟ್ಟೆಗೆ 3 ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಯಡಿಯೂರಪ್ಪನವರೇ ನೀವು ನಿಮ್ಮ ಕುಟುಂಬಕ್ಕಾಗಿ ಸರ್ಕಾರ ನಡೆಸುತ್ತಿದ್ದೀರಾ? ರಾಜ್ಯದ ಜನತೆಗಾಗಿ ಸರ್ಕಾರ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದರು.
ರಮೇಶ ಜಾರಕಿಹೊಳಿ ವಿರುದ್ಧ ಮತ್ತೆ ‘ಸಿಡಿ’ದ ಯುವತಿ
ಹುಣಸೂರು ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಅಭಿವೃದ್ಧಿಗಾಗಿ ಅನುದಾನ ನಿಡಲಾಗುತ್ತಿಲ್ಲ. ಎಂಎಲ್ಸಿ ಹೆಚ್.ವಿಶ್ವನಾಥ್ ಅವರಿಂದ ಹುಣಸೂರು ಕೆಲಸ ಮಾಡಿಸಿಕೊಳ್ಳೋಣವೆಂದರೆ ಅವರನ್ನೇ ಬಿಜೆಪಿ ಅಸಡ್ಡೆ ಮಾಡಿದೆ. ಹುಣಸೂರು ಕ್ಷೇತ್ರದ ಬಗ್ಗೆ ಸರ್ಕಾರಕ್ಕೆ ಯಾಕಿಷ್ಟು ತಾರತಮ್ಯ? ನಿಮ್ಮ ಕುಟುಂಬದವರು ಇಲ್ಲಿ ಇಲ್ಲವೆಂದೇ…? ಹೋಗಲಿ ನಿಮ್ಮ ಒಂದೆರಡು ಕುಟುಂಬವನ್ನು ಹುಣಸೂರಿಗೂ ತಂದುಬಿಡಿ… ನಾವು ಅವರಿಂದಲೇ ಕೆಲಸ ಮಾಡಿಸಿಕೊಳ್ಳುವ ಯತ್ನ ಮಾಡುತ್ತೇವೆ… ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮಗೆ ಸಿಎಂ ಯಡಿಯೂರಪ್ಪನವರು ವಿಶೇಷ ಅನುದಾನ ನಿಡುವುದು ಬೇಡ. ಮೈತ್ರಿ ಸರ್ಕಾರದಲ್ಲಿ ಬಿಡಿಗಡೆಯಾಗಿದ್ದ ಅನುದಾನ ಕೊಟ್ಟರೆ ಸಾಕು. ಯಾಕೆಂದರೆ ಮೈತ್ರಿ ಸರ್ಕರದಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ಸರ್ಕಾರ ತಡೆ ಹಿಡಿದಿದೆ. ಪಿಪಿಇ ಕಿಟ್ ನಿಂದ ಹಿಡಿದು ವ್ಯಾಕ್ಸಿನ್ ತರುವವರೆಗೂ ಸಿಎಂ ಕುಟುಂಬದವರೇ ಇದ್ದಾರೆ. ಯಡಿಯೂರಪ್ಪನವರು ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೂ ತಿಳಿಯದಂತೆ ಹಣ ಮಾಡುತ್ತಿದ್ದಾರೆ. ಯಡಿಯೂರಪ್ಪನವರೇ ಮೊದಲು ಪುತ್ರ ವ್ಯಾಮೋಹ ಬಿಡಿ. ಮೊದಲು ಕುಟುಂಬ ರಾಜಕಾರಣ ಮಾಡುವುದನ್ನು ನಿಲ್ಲಿಸಿ. ನೀವು ರಾಜ್ಯದ ಸಿಎಂ, ಕುಟುಂಬದ ಸಿಎಂ ಅಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದು ಕಿಡಿಕಾರಿದ್ದಾರೆ.