ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗೇಶ್ ಬಾಬ ಅನಾರೋಗ್ಯದಿಂದ ನಿಧನರಾಗಿದ್ದಾರೆ. 1957ರಲ್ಲಿ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಾಗೇಶ್ ಬಾಬ 1970ರಲ್ಲಿ ’ಅನಿರೀಕ್ಷಿತ’ ಎಂಬ ಚಿತ್ರದ ಮೂಲಕ ಪೂರ್ಣಪ್ರಮಾಣದಲ್ಲಿ ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.
ನಾಗೇಶ್ ಬಾಬ ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾಗೇಶ್ ಬಾಬ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಇಂದು ನಾಗೇಶ್ ಬಾಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪ್ರೇಮದ ಪುತ್ರಿ, ಪ್ರತಿಮಾ, ಬೆಟ್ಟದ ಕಳ್ಳ, ತೂಗುದೀಪ ಮೊದಲಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ಸಂಭಾಷಣಾಕಾರರಾಗಿ ಕೆಲಸ ಮಾಡಿದ್ದರು ನಾಗೇಶ್. ಸ್ಥಿರಚಿತ್ರ ಛಾಯಾಗ್ರಹಣ ವಿಭಾಗದಲ್ಲಿ ಕನ್ನಡ ಚಿತ್ರರಂಗಕ್ಕೆ ನಾಗೇಶ್ ಬಾಬು ಕೊಡುಗೆ ಅಪಾರ. ಬೆಂಗಳೂರಿನ ಗಾಂಧಿನಗರದಲ್ಲಿ 1972ರಲ್ಲಿ ಅವರು ಆರಂಭಿಸಿದ್ದ ಪ್ರಗತಿ ಸ್ಟುಡಿಯೋ ಕನ್ನಡ ಚಿತ್ರರಂಗದ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಹಣ ಮಾಡಿದೆ. 2009ರಲ್ಲಿ ನಾಗೇಶ್ ಬಾಬು ತಯಾರಿಸಿದ ತತ್ವಮಸಿ ಯು ಆರ್ ದಟ್ ಎಂಬ ಇಂಗ್ಲೀಷ್ ಸಾಕ್ಷ್ಯ ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿತ್ತು. ಹಲವು ವರ್ಷಗಳ ಕಾಲ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ಕಾರ್ಯನಿರ್ವಹಿಸಿದ್ದರು.