ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದಿನಕ್ಕೊಬ್ಬರಂತೆ ಆರೋಪಿಗಳನ್ನು ಬಂಧಿಸುತ್ತಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ಖ್ಯಾತ ನಟಿಯರಾದ ರಾಗಿಣಿ ಹಾಗೂ ಸಂಜನಾ ಸೇರಿದಂತೆ ಹಲವು ಆರೋಪಿಗಳು ಜೈಲು ಸೇರಿದ್ದಾರೆ. ಆದರೆ ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಪೂರೈಸುತ್ತಿದ್ದ ಪ್ರಮುಖ ಆರೋಪಿ, ಕಿಂಗ್ ಪಿನ್ ಯಾರು ಎಂಬುದು ಮಾತ್ರ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು.
ಇದೀಗ ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಪೂರೈಸುತ್ತಿದ್ದ ಆ ಪ್ರಮುಖ ಆರೋಪಿಗಳ ಪತ್ತೆಯಾಗಿದ್ದು, ಆಫ್ರಿಕನ್ ಪ್ರಜೆಗಳಿಬ್ಬರು ಇಡೀ ಪ್ರಕರಣದ ಕಿಂಗ್ ಪಿನ್ ಗಳಾಗಿದ್ದಾರೆ ಎಂಬುದು ತಿಳಿದು ಬಂದಿದೆ.
ಆ ಕಿಂಗ್ ಪಿನ್ ಗಳೇ ಲೂಮ್ ಪೆಪ್ಪರ್ ಹಾಗೂ ಬೆನಾಲ್ಡ್ ಉಡೆನ್ನಾ. 15 ದಿನಗಳ ಹಿಂದೆ ಸಿಸಿಬಿಯಿಂದ ಬಂಧನಕ್ಕೀಡಾಗಿರುವ ಲೂಮ್ ಪೆಪ್ಪರ್ ನೀಡಿದ ಮಾಹಿತಿ ಆಧರಿಸಿ ಇನ್ನೋರ್ವ ಆಫ್ರಿಕನ್ ಪ್ರಜೆ ಬೆನಾಲ್ಡ್ ಉಡೆನ್ನಾನನ್ನು ಬಂಧಿಸಲಾಗಿತು. ಇಬ್ಬರ ವಿಚಾರಣೆ ವೇಳೆ ಸ್ಯಾಂಡಲ್ ವುಡ್ ನ ಹಲವು ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಸುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಅಲ್ಲದೇ ಉಡೆನ್ನಾ, ಆದಿತ್ಯ ಆಳ್ವಾ ಆಪ್ತನಾಗಿದ್ದು, ಆದಿತ್ಯ ಆಳ್ವಾ, ರವಿಶಂಕರ್ ಹಾಗೂ ವಿರೇನ್ ಖನ್ನಾ ಜತೆ ನಿಕಟ ಸಂಪರ್ಕ ಹೊಂದಿದ್ದ. ಈ ಹಿನ್ನಲೆಯಲ್ಲಿ ಆದಿತ್ಯಾ ಆಳ್ವಾ ರೆಸಾರ್ಟ್ ಮೇಲೂ ಸಿಸಿಬಿ ದಾಳಿ ನಡೆಸಿತ್ತು ಎಂದು ತಿಳಿದು ಬಂದಿದೆ.