ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಆರೋಪಿಗಳಿಗೆ ಸಹಾಯಮಾಡುತ್ತಿದ್ದ ಹಾಗೂ ತನಿಖೆಯ ಬಗ್ಗೆ ಮಾಹಿತಿಗಳನ್ನು ನೀಡಿ ಪ್ರಮುಖ ಆರೋಪಿಗಳು ತಪ್ಪಿಸಿಕೊಳ್ಳುವಂತೆ ಮಾಡುತ್ತಿದ್ದ ಸಿಸಿಬಿ ಎಸಿಪಿ ಎಂ.ಆರ್. ಮುಧವಿ ಹಾಗೂ ಮುಖ್ಯಪೇದೆ ಮಲ್ಲಿಕಾರ್ಜುನ್ ಅವರನ್ನು ಅಮಾನತು ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಎಸಿಪಿ ಮುಧವಿ ಡ್ರಗ್ಸ್ ಪೆಡ್ಲರ್ ಗಳ ಜೊತೆಯೇ ಲಕ್ಷಾಂತರ ರೂ. ಡೀಲ್ ಮಾಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳದಂತೆ ತಪ್ಪಿಸಲು ಎಸಿಪಿ ಮುಧವಿ, ಪ್ರಮುಖ ಆರೋಪಿ ವಿರೇನ್ ಖನ್ನಾಗೆ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 21 ಲಕ್ಷಕ್ಕೆ ಡೀಲ್ ಕುದುರಿತ್ತು. ಎಸಿಪಿಗೆ ಮುಖ್ಯಪೇದೆ ಮಲ್ಲಿಕಾರ್ಜುನ್ ಸಾಥ್ ನೀಡಿದ್ದರು ಎನ್ನಲಾಗಿದೆ.
ಅಲ್ಲದೇ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನಡೆಸಿದ ವಿಚಾರಣೆ ವೇಳೆ ಎಸಿಪಿ ಮುಧವಿ ಹಾಗೂ ಹೆಡ್ ಕಾನ್ಸ್ ಟೇಬಲ್ ಮಲ್ಲಿಕಾರ್ಜುನ್ ತಪ್ಪೊಪ್ಪಿಕೊಂಡಿದ್ದು, ತಾವು ಪ್ರಕರಣ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದುದಾಗಿ ಹಾಗೂ ತನಿಖೆಯ ಮಾಹಿತಿಗಳನ್ನು ನೀಡುವ ಮೂಲಕ ಪ್ರಮುಖ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.