ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದು ಜಗಜ್ಜಾಹೀರಾಗಿದೆ. ಕೇಂದ್ರ ಸರ್ಕಾರ ಏನು ಕಡಿದು ಕಟ್ಟೆ ಹಾಕಿದೆ ಅದನ್ನೂ ರಾಜ್ಯದ ಜನತೆಗೆ ತಿಳಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಂಸದ ತೇಜಸ್ವಿ ಸೂರ್ಯಗೆ ಆಗ್ರಹಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಯ ಭಾಗ್ಯದ ಬಾಗಿಲು ತೆರೆಯುತ್ತೆ ಎಂದು ಮತದಾರರ ದಿಕ್ಕುತಪ್ಪಿಸಿ ಅಧಿಕಾರಕ್ಕೆ ಬಂದಿದ್ದೀರಿ, ಈಗ ರಾಜ್ಯದಲ್ಲಿ ದೌರ್ಭಾಗ್ಯದ ಬಾಗಿಲು ತೆರೆದಿದೆ, ಸ್ಮಶಾನದಲ್ಲಿ ಹೆಣಗಳ ಸಾಲು ಬೆಳೆಯುತ್ತಿದೆ. ಇದೇನಾ ಪ್ರಧಾನಿ ಮೋದಿಯವರ ಅಚ್ಚೇ ದಿನ್? ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಪಿಎಂ ಕೇರ್ಸ್ ನಿಧಿಗೆ ರಾಜ್ಯದಿಂದ ಎಷ್ಟು ಹಣ ಸಂದಾಯವಾಗಿದೆ? ಅದರಿಂದ ರಾಜ್ಯಕ್ಕೆ ಎಷ್ಟು ನೆರವು ಹರಿದು ಬಂದಿದೆ? ರಾಜ್ಯಕ್ಕೆ ವೆಂಟಿಲೇಟರ್, ಐಸಿಯು, ಆಕ್ಸಿಜನ್ ಎಷ್ಟು ಸಿಕ್ಕಿದೆ? ಮಾಹಿತಿ ಹಕ್ಕಿಗೆ ನಿಷೇಧ ಹೇರಿ ರಕ್ಷಿಸುತ್ತಿರುವುದು ಯಾರನ್ನು ತಮ್ಮನ್ನೋ? ಅಧಿಕಾರಿಗಳನ್ನೋ? ರಾಜ್ಯದ ಕೊರೊನಾ ರೋಗಿಗಳಿಗೆ ಬೆಡ್ ಕೊಡಿ, ವೆಂಟಿಲೇಟರ್ ಕೊಡಿ, ಆಕ್ಸಿಜನ್ ಕೊಡಿ ಎಂದು ಸಿಎಂ ಯಡಿಯೂರಪ್ಪ ಭಿಕ್ಷುಕರ ರೀತಿ ಪ್ರಧಾನಿಯನ್ನು ಬೇಡುತ್ತಿದ್ದಾರೆ. ರಾಜ್ಯದ 25 ಬಿಜೆಪಿ ಸಂಸದರು ಯಾವ ಬಿಲ ಸೇರಿದ್ದಾರೆ? ಇಲ್ಲಿ ಹುಲಿಯಂತೆ ಕಿರುಚಾಡುವ ಸಂಸದರು ಪ್ರಧಾನಿ ಮೋದಿ ಎದುರು ಇಲಿಗಳಾಗಿ ಬಿಲ ಸೇರುವುದು ಯಾಕೆ? ಎಂದು ಕಿಡಿಕಾರಿದ್ದಾರೆ.