ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರುವ ಪ್ರಕರಣದ ಕಿಂಗ್ ಪಿನ್ ವೀರೇನ್ ಖನ್ನಾಗೆ ಎಸಿಪಿಯೊಬ್ಬರು ಸಾಥ್ ನೀಡಿದ್ದರು ಎಂಬ ವಿಚಾರ ಬಹಿರಂಗವಾಗಿದೆ.
ಬಂಧಿತ ಡ್ರಗ್ಸ್ ಕಿಂಗ್ ಪಿನ್ ವೀರೇನ್ ಖನ್ನಾ ಸಿಸಿಬಿ ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗಪಡಿಸಿದ್ದು, ತನಗೆ ಪೊಲೀಸರೇ ಬೆಂಬಲ ನೀಡಿದ್ದರು ಎಂಬುದನ್ನು ಬಾಯ್ಬಿಟ್ಟಿದ್ದಾನೆ.
ಡ್ರಗ್ಸ್ ಪೆಡ್ಲರ್ ಕೂಡ ಆಗಿರುವ ಆರೋಪಿ ವೀರೇನ್ ಖನ್ನಾ ಬೆಂಗಳೂರು, ದೆಹಲಿ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಪಾರ್ಟಿ ಗಳಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಆತ ಬೆಂಗಳೂರಿಗೆ ಬರುತ್ತಾನೆ ಎಂದರೆ ಸ್ವತಃ ಎಸಿಪಿಯೊಬ್ಬರು ಆತನಿಗೆ ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತಿದ್ದರು. ಎಸಿಪಿ ಜತೆ ಇನ್ನೂ ಕೆಲವು ಪೊಲೀಸರು ಕೂಡ ಆತನಿಗೆ ಸಾಥ್ ನೀಡಿದ್ದಾರೆ ಎಂದು ಹೇಳಲಾಗಿದೆ.
ವೀರೇನ್ ಬೆಂಗಳೂರಿನ ʼದಿ ಪಾರ್ಕ್ʼ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುತ್ತಿದ್ದ. ಅಲ್ಲದೇ ಆಗಾಗ ಬೆಂಗಳೂರಿನ ಹಲವೆಡೆಗಳಲ್ಲಿ ಪಾರ್ಟಿ ಆಯೋಜನೆ ಮಾಡಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಈತ ಭಾಗಿಯಾಗುತ್ತಿದ್ದ ಹಲವು ಪಾರ್ಟಿಗಳಲ್ಲೂ ಎಸಿಪಿ ಭಾಗವಹಿಸುತ್ತಿದ್ದರೆಂಬುದು ವಿಚಾರಣೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.