ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಸ್ಯಾಂಡಲ್ ವುಡ್ ನಟ ಲೂಸ್ ಮಾದ ಯೋಗಿ ಐ ಎಸ್ ಡಿ ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಯೋಗಿ ತಾಯಿ ಅಂಬುಜಾ, ನನ್ನ ಮಗನಿಗೆ ನಟಿ ರಾಗಿಣಿ ಜೊತೆ ಸ್ನೇಹವಿದೆ ಎಂದ ಮಾತ್ರಕ್ಕೆ ಅವರ ಅಭ್ಯಾಸಗಳನ್ನು, ಅವರ ತಪ್ಪುಗಳನ್ನು ಇವರು ಕಲಿಯಬೇಕೆಂದೇನಿಲ್ಲ. ಅಭ್ಯಾಸಗಳು ಅವರವರ ವೈಯಕ್ತಿಕ. ಆದರೆ ನನ್ನ ಮಗನಿಗೆ ಡ್ರಗ್ಸ್ ಲಿಂಕಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಂಬುಜಾ, ಪೊಲೀಸರು ನೋಟೀಸ್ ನೀಡಿದ ಬೆನ್ನಲ್ಲೇ ಯೋಗಿ ವಿಚಾರಣೆಗೆ ಹಾಜರಾಗಿ ಬಂದಿದ್ದಾನೆ. ಅವನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಹೆದರುವ ಅಗತ್ಯವಿಲ್ಲ. ವಿಚಾರಣೆಗೆ ಹೋಗಿಬಂದ ಬಳಿಕವೂ ಆತ ಆರಾಮಾಗಿದ್ದಾನೆ. ಅವನು ಪಾರ್ಟಿಗಳಿಗೂ ಅಷ್ಟಾಗಿ ಹೋಗುವವನಲ್ಲ. ಮನೆಯಲ್ಲಿಯೂ ತುಂಬಾ ಕಡಿಮೆ ಮಾತನಾಡುತ್ತಾನೆ. ಡ್ರಗ್ಸ್ ನಂತಹ ಯಾವುದೇ ಚಟ ಆತನಿಗಿಲ್ಲ ಎಂದಿದ್ದಾರೆ.
ಸಾಲು ಸಾಲು ಸಿನಿಮಾಗಳ ಸೋಲು ಅವನನ್ನ ಸ್ವಲ್ಪ ವಿಚಲಿತನನ್ನಾಗಿ ಮಾಡಿರಬಹುದು. ಆದರೆ ಅವನು ತಪ್ಪು ಮಾಡಿಲ್ಲ. ಆಗಾಗ ಸ್ವಲ್ಪ ಡ್ರಿಂಕ್ಸ್ ಮಾಡುತ್ತಾನೆ, ಸಿಗರೇಟ್ ಸೇದುತ್ತಾನೆ ಬಿಟ್ಟರೆ ಡ್ರಗ್ಸ್ ಅಭ್ಯಾಸವಿಲ್ಲ. ಆತ ದುಶ್ಚಟಗಳ ದಾಸನಲ್ಲ. ನಮ್ಮ ಮಕ್ಕಳ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ರಾಗಿಣಿ ಜೊತೆ ಸ್ನೇಹವಿದ್ದ ಮಾತ್ರಕ್ಕೆ ಸ್ನೇಹಿತರ ದುರಭ್ಯಾಸ ನಮಗೂ ಇದೆ ಎಂಬುದು ತಪ್ಪು ಎಂದು ತಿಳಿಸಿದ್ದಾರೆ.