ನವದೆಹಲಿ: ಸಂಪುಟದಲ್ಲಿ ತನಗೆ ಸ್ಥಾನ ಸಿಗದಿರುವುದರಿಂದ ಅಸಮಾಧಾನಗೊಂಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದು, ಸಧ್ಯದ ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗೆ ದೂರು ನೀಡಿದ್ದಾರೆ.
ಅರುಣ್ ಸಿಂಗ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸಿ.ಪಿ.ಯೋಗೇಶ್ವರ್ ಭ್ರಷ್ಟಾಚಾರ ಮಾಡಿ ಆಸ್ತಿ ಸಂಪಾದನೆ ಮಾಡಿದ್ದಾರೆ, ಅಂಥವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಸಚಿವ ಜಾರಕಿಹೊಳಿ ಹೈಕಮಾಂಡ್ ನಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿ.ಪಿ.ಯೋಗೇಶ್ವರ್ 9 ಕೋಟಿ ರೂ. ಸಾಲ ಮಾಡಿದ್ದಾರೆ, ಮನೆ ಮಾರಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳುತ್ತಿದ್ದಾರೆ. ಯೋಗೇಶ್ವರ್ ಭ್ರಷ್ಟಾಚಾರದಿಂದ ಸಂಪಾದಿಸಿದ ಆಸ್ತಿಯದು. 4 ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಹೊಸ ಬಂಗಲೆ ಖರೀದಿ ಮಾಡಿದ್ದಾರೆ. ಇದರ ನಡುವೆ ಅವರು ಯಾಕೆ 9 ಕೋಟಿ ರೂ. ಸಾಲ ಮಾಡಿದರು? ಸಿ.ಪಿ ಯೋಗೇಶ್ವರ್ ರಿಂದ ರಾಜ್ಯ ಬಿಜೆಪಿ ಸರ್ಕಾರ ಬಂದಿಲ್ಲ. ಬೇರೆ ಪಕ್ಷದವರು ಇವರ ಮುಖ ನೋಡಿ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು. ನಾನು, ಸಿಎಂ ಯಡಿಯೂರಪ್ಪ ವಿರುದ್ಧವಾಗಲಿ, ಸಂಘಟನೆ ವಿರಿದ್ಧವಾಗಲಿ ದೂರು ನೀಡಿಲ್ಲ. ಅರುಣ್ ಸಿಂಗ್ ನನ್ನ ಅಭಿಪ್ರಾಯ ಆಲಿಸಿದ್ದಾರೆ. ಮುಂದಿನ ವಾರ ನಾವು ಸಭೆ ಅಸಮಾಧಾನಿತ ಶಾಸಕರು ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು.