ಬೆಂಗಳೂರು: ನಟಿ ಸಂಜನಾ ಗಲ್ರಾಣಿ ವಿಚಾರದಲ್ಲಿ ಸಿಸಿಬಿ ನಡೆಯ ಬಗ್ಗೆ ತಕರಾರು ತೆಗೆದಿರುವ ಸಂಜನಾ ಪರ ವಕೀಲ ಶ್ರೀನಿವಾಸರಾವ್, ನಟಿಗೆ ಜಾಮೀನು ತಪ್ಪಿಸುವ ಉದ್ದೇಶದಿಂದಲೇ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಸಿಬಿ ಕಸ್ಟಡಿ ಅವಧಿ ಮುಗಿದ ಹಿನ್ನಲೆಯಲ್ಲಿ ನಟಿ ಸಂಜನಾ ಅವರನ್ನು ಸಿಸಿಬಿ ಅಧಿಕಾರಿಗಳು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಸಿಸಿಬಿ ಈಗಾಗಲೇ ನಟಿಯನ್ನು ಸಾಕಷ್ಟು ವಿಚಾರಣೆಗೆ ಒಳಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಬಹುದು ಎಂದು ತಿಳಿಸಿದೆ.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಟಿ ಸಂಜನಾ ಪರ ವಕೀಲ ಶ್ರೀನಿವಾಸರಾವ್, ಸಂಜನಾ ಮೇಲಿನ ಆರೋಪ ಏನೆಂಬುದನ್ನೇ ಸಿಸಿಬಿ ಅಧಿಕಾರಿಗಳು ತಿಳಿಸುತ್ತಿಲ್ಲ. ಆದರೂ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮನವಿ ಎಷ್ಟು ಸರಿ? ಯಾವ ಸೆಕ್ಷನ್ ಅಡಿಯಲ್ಲಿ ಸಂಜನಾ ಮೇಲೆ ಆರೋಪ ಇದೆ ಎಂಬುದನ್ನೂ ತಿಳಿಸುತ್ತಿಲ್ಲ. ಸಿಸಿಬಿ ನ್ಯಾಯಾಲಯಕ್ಕೆ ನೀಡುತ್ತಿರುವ ಕಾರಣ ಅಸ್ಪಷ್ಟವಾಗಿದೆ. ಹೀಗಾಗಿ ಸಂಜನಾ ಅವರಿಗೆ ನ್ಯಾಯಾಂಗ ಬಂಧನಕ್ಕೆ ನೀಡುವ ಅಗತ್ಯವಿಲ್ಲ ಎಂದು ವಾದ ಮಂಡಿಸಿದ್ದಾರೆ.
ಅಲ್ಲದೇ ಸಿಸಿಬಿ ಅಧಿಕಾರಿಗಳು ಸಂಜನಾ ಅವರನ್ನು ಎನ್ ಡಿ ಪಿ ಎಸ್ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆದರೆ ಅವರಿಗೆ ಜಾಮೀನು ಸಿಗುವುದನ್ನು ತಪ್ಪಿಸಬೇಕು ಎಂಬ ದುರುದ್ದೇಶದಿಂದಾಗಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸಿಸಿಬಿ ಅಧಿಕಾರಿಗಳ ಈ ಕ್ರಮ ಖಂಡನೀಯ ಎಂದು ತಕರಾರು ತೆಗೆದಿದ್ದಾರೆ.