ಬೆಂಗಳೂರು: ಸಿಸಿಬಿ ಇನ್ಸ್ ಪೆಕ್ಟರ್ ಎಂದು ಹೇಳಿಕೊಂಡು ಉದ್ಯಮಿಯೊಬ್ಬರಿಗೆ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ ಆರೋಪಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಉದ್ಯಮಿ ಮಂಜುನಾಥ್ ಎಂಬುವವರು ಯುವತಿಯೊಂದಿಗೆ ಹೋಟೆಲ್ ಒಂದರಲ್ಲಿದ್ದುದನ್ನು ನೋಡಿದ್ದ ಆರೋಪಿ ಶ್ರೀನಿವಾಸ್ ಎಂಬಾತ, ಇದೇ ವಿಚಾರವನ್ನಿಟ್ಟುಕೊಂಡು ಉದ್ಯಮಿಗೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ತಾನು ಸಿಸಿಬಿ ಇನ್ಸ್ ಪೆಕ್ಟರ್, ನೀವು ಯುವತಿಯೊಂದಿಗೆ ಇರುವ ವಿಡಿಯೋ ನನ್ನ ಬಳಿಯಿದ್ದು, ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗೆ ಬೆದರಿಕೆಯೊಡ್ದಿ ಹಂತ ಹಂತವಾಗಿ ಲಕ್ಷ ಲಕ್ಷ ರೂ. ಪಡೆದುಕೊಂಡಿದ್ದಾನೆ.
ಅಂತಿಮವಾಗಿ ವಿಡಿಯೋ ಡಿಲೀಟ್ ಮಾಡಬೇಕು ಎಂದರೆ ಒಮ್ಮೆಲೇ 4 ಲಕ್ಷ ರೂ ಹಣ ನೀಡಬೇಕು ಎಂದು ಆರೋಪಿ ಬೇಡಿಕೆ ಇಟ್ಟಿದ್ದಾನೆ. ಅನುಮಾನಗೊಂಡ ಉದ್ಯಮಿ ಮಂಜುನಾಥ್ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂತಿಮವಾಗಿ ಇದೀಗ ಆರೋಪಿ ಶ್ರೀನಿವಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ.