ಬೆಂಗಳೂರು: ಸಿಬಿಐ ಅಧಿಕಾರಿಗಳು ನಿನ್ನೆ ನಡೆಸಿದ್ದ ಏಕಾಏಕಿ ದಾಳಿಗೆ ಶಾಕ್ ಆಗಿದ್ದ ಸಂಸದ ಡಿ.ಕೆ ಸುರೇಶ್, ಇದೀಗ ಸಿಬಿಐ ಅಧಿಕಾರಿಗಳಿಗೇ ಶಾಕ್ ನೀಡಿದ್ದಾರೆ. ಹೌದು. ಇದೀಗ ತಮಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಡಿ.ಕೆ ಸುರೇಶ್ ತಿಳಿಸಿದ್ದು, ಈಗ ಸಿಬಿಐ ಅಧಿಕಾರಿಗಳಿಗೂ ಕೋವಿಡ್ ಭೀತಿ ಶುರುವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಡಿ.ಕೆ ಸುರೇಶ್, ಕೋವಿಡ್ ಪರೀಕ್ಷೆಯಲ್ಲಿ ತಮಗೆ ಸೋಂಕಿರುವುದು ದೃಢಪಟ್ಟಿದೆ. ಸಧ್ಯಕ್ಕೆ ನನ್ನ ಆರೋಗ್ಯ ಸ್ಥಿರವಾಗಿದೆ ಹಾಗೂ ಸುರಕ್ಷಿತವಾಗಿದೆ. ಆದರೆ ಇತ್ತೀಚೆಗೆ ನನ್ನ ಸಂಪರ್ಕದಲ್ಲಿದ್ದ ಸ್ನೇಹಿತರು, ಸಿಬಿಐ ಅಧಿಕಾರಿಗಳು, ಮಾಧ್ಯಮ ಮಿತ್ರರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ನಿವಾಸಗಳ ಮೇಲೆ ನಿನ್ನೆಯಷ್ಟೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಡಿ.ಕೆ ಸುರೇಶ್ ಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಅವರ ಸಂಪರ್ಕಕ್ಕೆ ಬಂದಿದ್ದ ಅಧಿಕಾರಿಗಳು, ಮಾಧ್ಯಮದವರೂ, ಕಾರ್ಯಕರ್ತರು ಸೇರಿದಂತೆ ಹಲವರಿಗೆ ಕೊರೊನಾತಂಕ ಎದುರಾಗಿದೆ.