ಬೆಂಗಳೂರು: ಉಪಚುನಾವಣೆಗೆ ಅಭ್ಯರ್ಥಿಗಳಿಲ್ಲದೇ ಜೆಡಿಎಸ್ ನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ, ನನ್ನ ಪ್ರಕಾರ ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ ಎಂದು ವ್ಯಂಗ್ಯವಾಡಿದ್ದರು. ಸಿದ್ದರಾಮಯ್ಯ ಹೇಳಿಕೆಗೆ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಜೆಡಿಎಸ್ ನಿಂದ ಪ್ರವರ್ಧಮಾನಕ್ಕೆ ಬಂದು, ಜೆಡಿಎಸ್ ನಿಂದಲೇ ಡಿಸಿಎಂ ಆಗಿ, ಜೆಡಿಎಸ್ ಮುಖಂಡರನ್ನೇ ತಮ್ಮ ಈಗಿನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾ ಅದೇ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಉಪಚುನಾವಣೆಗೆ ಅಭ್ಯರ್ಥಿಗಳು ಗತಿಯಿಲ್ಲದೆ ನಮ್ಮ ಪಕ್ಷದವರನ್ನು ಸೆಳೆಯುತ್ತಿರುವ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವೇ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ದೇಶದ ಅತಿ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಇಂದು ಯಾವ ಪರಿಸ್ಥಿತಿಯಲ್ಲಿದೆ? ಯಾವ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಿದೆ? ಯಾರ ಯಾರ ಹೆಗಲ ಮೇಲೆ ಕುಳಿತು ರಾಜಕೀಯ ಮಾಡುತ್ತಿದೆ? ಎಲ್ಲೆಲ್ಲಿ ಯಾರು ಯಾರಿಗೆ ಹೆಗಲಾಗಿದೆ? ಎಂಬುದನ್ನು ಜೆಡಿಎಸ್ ಉಪ್ಪು ತಿಂದ ಸಿದ್ದರಾಮಯ್ಯನವರು ಉತ್ತರ ನೀಡಲಿ ಎಂದಿದ್ದಾರೆ.
ಮಿತ್ರಪಕ್ಷಗಳನ್ನೇ ಆಪೋಷನ ಪಡೆದು ಜೀವಿಸುತ್ತಿರುವ, ಜನರಿಂದ ತಿರಸ್ಕರಿಸಲ್ಪಟ್ಟಿರುವ, ಬೇರೆ ಪಕ್ಷಗಳ ಜೊತೆ ಚೌಕಾಸಿ ಮಾಡುತ್ತಿರುವ ಕಾಂಗ್ರೆಸ್ ಭಾರತದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿದೆಯೇ? ಕಾಂಗ್ರೆಸ್ ಅಹಂಕಾರ ಪ್ರವೃತ್ತಿ ಮುಂದುವರೆಸಿಕೊಂಡು ಹೋದರೆ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಜೆಡಿಎಸ್ ಕೂಡ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದು, ನೀವು ಯಾವ ಪಕ್ಷಕ್ಕೆ ತಾನೇ ನಿಯತ್ತಾಗಿದ್ದೀರಿ ಸಿದ್ದರಾಮಯ್ಯನವರೇ? ಉಂಡ ಮನೆಗೆ ದ್ರೋಹ ಬಗೆದವರು ನಿಮ್ಮ ಶಿಷ್ಯಂದಿರನ್ನು ನೀವೇ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. ಡಿಸಿಎಂ ಮಾಡಿದ್ದ ಜೆಡಿಎಸ್ ರಾಜಕೀಯ ಪಕ್ಷವಲ್ಲ ಎನ್ನುವ ನಿಮಗೆ ಸಿಎಂ ಮಾಡಿದ ಕಾಂಗ್ರೆಸ್ ಮೇಲಾದರೂ ನಿಯತ್ತಿದೆಯೇ ಎಂದು ಪ್ರಶ್ನಿಸಿದೆ.