ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಕರಣ ಮುಚ್ಚಿಹಾಕಲು ಏನು ಮಾಡಬೇಕು ಅದೆಲ್ಲವನ್ನು ಮಾಡುತ್ತಿದ್ದಾರೆ. ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲಿ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಯುವತಿ ಪೋಷಕರ ಮೇಲೆ ಒತ್ತಡ ಹೇರಿ ಏನೇನೋ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ಏನು ಮಾಡುತ್ತಾರೆ ಅದೆಲ್ಲವನ್ನೂ ಮಾಡಲಿ, ನನ್ನ ವಿರುದ್ಧ ಆರೋಪ ಮಾಡಿದ ಮಾತ್ರಕ್ಕೆ ನಾನು ಆರೋಪಿಯಾಗಲ್ಲ, ಕಾನೂನು ಇದೆ. ತನಿಖಾಧಿಕಾರಿಗಳಿದ್ದಾರೆ. ತನಿಖೆ ನಡೆಸಲಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ತನ್ನ ಘನತೆಗೆ ತಕ್ಕಂತೆ ಗೌರವಯುತವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಸಂತ್ರಸ್ತ ಯುವತಿಯನ್ನು ಪತ್ತೆ ಮಾಡಲಾಗದಿರುವುದು ನಾಚಿಕೆಗೇಡಿನ ಸಂಗತಿ – ಸರ್ಕಾರಕ್ಕೆ ಸಿದ್ದರಾಮಯ್ಯ ತರಾಟೆ
ಇದೇ ವೇಳೆ ಬೆಳಗಾವಿ ಭೇಟಿ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಬೆಳಗಾವಿಗೆ ಹೋಗುತ್ತಿದ್ದೇನೆ. ಪ್ರತಿಭಟನೆಗಳು ನಡೆದರೆ ನಡೆಯಲಿ ಒಳ್ಳೆಯದೇ. ನನಗೆ ಯಾವುದೇ ಭದ್ರತೆಯ ಅಗತ್ಯವಿಲ್ಲ. ಏನು ಘನಕಾರ್ಯ ಮಾಡಿದ್ದಾರೆ ಅಂತ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.