ಬೆಂಗಳೂರು: ಸಿಗಂದೂರು ದೇವಾಲಯದ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ದೇವಾಲಯವನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಡಿಗ ಸಮುದಾಯದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಸಿಗಂದೂರು ದೇವಾಲಯದ ಪ್ರಧಾನ ಅರ್ಚಕರು ಹಾಗೂ ಆಡಳಿತ ಮಂಡಳಿ ನಡುವಿನ ಸಂಘರ್ಷ ಬೆನ್ನಲ್ಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿತ್ತು. ಈ ಸಮಿತಿ ಮಾರ್ಪಾಡು ಮಾಡುವಂತೆ ಹಾಗೂ ದೇವಾಲಯದಲ್ಲಿ ಈ ಹಿಂದೆ ಇದ್ದಂತೆ ಪದ್ಧತಿಗಳನ್ನು ನಡೆಸಿಕೊಂಡು ಹೋಗಲು ಅನುವು ಮಾಡಿಕೊಡುವಂತೆ ಮನವಿ ಮಾಡಲು ಈಡಿಗ ಸಮುದಾಯದ ಸ್ವಾಮೀಜಿಗಳ ನೇತೃತ್ವದ ನಿಯೋಗ ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.
ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿರುವ ಸಲಹಾ ಸಮಿತಿ 4 ತಿಂಗಳ ಕಾಲ ಮುಂದುವರೆಯುತ್ತದೆ. ನಂತರ ಸಮಿತಿ ಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ದೇವಾಲಯವನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳುವುದಿಲ್ಲ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ನಿಯೋಗಕ್ಕೆ ತಿಳಿಸಿದ್ದಾರೆ.