ಶಿವಮೊಗ್ಗ: ಶ್ರೀ ಕ್ಷೇತ್ರ ಸಿಗಂದೂರು ದೇವಾಲಯದಲ್ಲಿ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರ ನಡುವಿನ ಶೀತಲ ಸಮರ ತಾರಕಕ್ಕೇರಿದ್ದು, ಎರಡು ಗುಂಪುಗಳ ನಡುವಿನ ಘರ್ಷಣೆಗೆ ಕಾರಣವಾಗಿದೆ.
ನವರಾತ್ರಿಗೂ ಮುನ್ನ ದೇವಾಲಯದಲ್ಲಿ ಚಂಡಿಕಾ ಹೋಮ ಮಾಡಬೇಕಿತ್ತು. ಆದರೆ ಹೋಮಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಹಾಗೂ ಕುಟುಂಬದವರು ದೇವಸ್ಥಾನದ ಗರ್ಭಗುಡಿ ಎದುರು ಮೌನ ಪ್ರತಿಭಟನೆಗೆ ಕುಳಿತಿದ್ದರು ಎನ್ನಲಾಗಿದೆ.
ಅರ್ಚಕರ ಈ ಕ್ರಮಕ್ಕೆ ಆಡಳಿತ ಮಂಡಳಿಯ ರಾಮಪ್ಪ ಹಾಗೂ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಅರ್ಚಕರು ಅನಗತ್ಯ ಗೊಂದಲವುಂಟಾಗುವಂತೆ ಮಾಡಿದ್ದಾರೆ ಎಂದು ಗಲಾಟೆ ಮಾಡಿದ್ದಾರೆ.
ಅಲ್ಲದೇ ಮೌನ ಪ್ರತಿಭಟನೆ ಬಿಟ್ಟು ಹೊರಬರುವಂತೆ ಶೇಷಗಿರಿ ಭಟ್ಟರಿಗೆ ಒತ್ತಾಯಿಸಿದ್ದಾರೆ. ಈ ವೇಳೆ ಅರ್ಚಕ ಶೇಷಗಿರಿ ಭಟ್ ಹಾಗೂ ರಾಮಪ್ಪ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಸಂಘರ್ಷ ಏರ್ಪಟ್ಟಿದೆ. ಗಲಾಟೆಯಲ್ಲಿ ದೇವಾಲಯದ ಕಚೇರಿಯಲ್ಲಿನ ಪೀಠೋಪಕರಣಗಳು ಧ್ವಂಸಗೊಂಡಿವೆ. ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಗುಂಪುಗಳನ್ನು ಸಮಾಧಾನಪಡಿಸಿದ್ದಾರೆ. ಸಧ್ಯ ದೇವಾಲಯದ ಸುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.