ಕೊರೊನಾ ಆಸ್ಪತ್ರೆಯ ಹಾಸಿಗೆ, ದಿಂಬು, ಹೊದಿಕೆಗಳ ಖರೀದಿ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಲೇ ಇದೆ. ಪಕ್ಷ, ಪ್ರತಿ ಪಕ್ಷಗಳ ನಾಯಕರಿಂದ ಆರೋಪ – ಪ್ರತ್ಯಾರೋಪ ನಡೆಯುತ್ತಲೇ ಇದೆ. ಈ ಖರೀದಿಯಲ್ಲಿ ಸರ್ಕಾರ ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಲೇ ಇದೆ. ಇಂದೂ ಕೂಡ ಕಾಂಗ್ರೆಸ್, ಸಿಎಂ ರಾಜಕೀಯ ಕಾರ್ಯದರ್ಶಿ ವಿರುದ್ದ ಗುರುತರ ಆರೋಪ ಮಾಡಿದೆ.
ಸುದ್ದಿಗೋಷ್ಟಿ ನಡೆಸಿ ಆರೋಪಗಳ ಸುರಿಮಳೆಗೈದಿದ್ದಾರೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್. ಇದೇ ವೇಳೆ ಮಾತನಾಡಿರುವ ಅವರು, ಖರೀದಿಯ ಲೂಟಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎಸ್.ಆರ್. ವಿಶ್ವನಾಥ್ ಭಾಗಿಯಾಗಿದ್ದಾರೆ. ಜೊತೆಗೆ ಬಸವರಾಜ ಬೊಮ್ಮಾಯಿಯವರ ಸಂಬಂಧಿ ಕಿದ್ವಾಯಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಮಂತ್ರಿಗಳ ಸಂಬಂಧಿಕರಿಗೆ ಈ ಗುತ್ತಿಗೆಯನ್ನು ಕೊಡಲಾಗಿದೆ. ಕಾಂಗ್ರೆಸ್ ಎಷ್ಟು ಬಾರಿ ಆರೋಪ ಮಾಡಿದರೂ ಇವರ ಲೂಟಿತನ ನಿಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕೊರೊನಾ ಕಂಟ್ರೋಲ್ ಮಾಡಲು ಸರ್ಕಾರ ಅಸಮರ್ಥವಾಗಿದೆ. ಇಲಾಖೆಗಳ ಮಂತ್ರಿಗಳ ನಡುವೆಯೇ ಹೊಂದಾಣಿಕೆ ಇಲ್ಲ. ಇವರಿಗೆ ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದರು.