ಬೆಳಗಾವಿ: ಸಿಎಂ ಬಿ.ಎಸ್.ವೈ. ರೈತರ ಶಾಲು ಹಾಕಿಕೊಂಡು ಬರ್ತಾರೆ. ರೈತರ ಸಾಲ ಮನ್ನಾ ಮಾಡಿ ಎಂದರೆ ಕಾರಣ ಕೊಡ್ತಾರೆ. ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ ಎಂದು ಹೇಳ್ತಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಉಪಚುನಾವಣೆ ಹಿನ್ನೆಲೆಯಲ್ಲಿ ಸವದತ್ತಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರೈತರ ಸಾಲ ಮನ್ನಾ ಮಾಡಿ ಎಂದರೆ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ ಎಂದು ಹೇಳುತ್ತಾರೆ. ಆದರೆ ಸಚಿವ ಈಶ್ವರಪ್ಪನವರ ಮನೆಯಲ್ಲಿ ನೋಟು ಎಣಿಸುವ ಯಂತ್ರವೇ ಸಿಕ್ಕಿ ಬಿಟ್ಟಿತ್ತು. ಪಾಪ ಆತ ಪೆದ್ದ ಅಲ್ವಾ ಹಾಗಾಗಿ ಒಪ್ಕೊಂಡ ಎಂದು ವ್ಯಂಗ್ಯವಾಡಿದ್ದಾರೆ.
ಮಾನವೀಯತೆ ಮೆರೆದ ಸಚಿವ ಕೆ.ಎಸ್. ಈಶ್ವರಪ್ಪ
ರಾಜ್ಯದ 25 ಬಿಜೆಪಿ ಸಂಸದರು ಹೇಡಿಗಳು. ಸಿಎಂ ಯಡಿಯೂರಪ್ಪ ಸರ್ಕಾರ ಕೂಡ ಹೇಡಿ ಸರ್ಕಾರ. ರಾಜ್ಯದಲ್ಲಿನ ಸಮಸ್ಯೆ ಬಗ್ಗೆ, ಜನರ ಸಂಕಷ್ಟದ ಬಗ್ಗೆ ಪ್ರಧಾನಿ ಮೋದಿ ಬಳಿ ಹೇಳಲು ಗಢಗಢ ನಡುಗುತ್ತಾರೆ. ಪ್ರಧಾನಿ ಮೋದಿಯಾಗಲಿ, ಸಿಎಂ ಬಿ.ಎಸ್.ವೈ. ಆಗಲಿ ರೈತರ ಸಾಲ ಮನ್ನಾ ಮಾಡಲ್ಲ. ಕಾಂಗ್ರೆಸ್ ಸರ್ಕಾರ ಜನರಿಗಾಗಿ ತಂದ ಯೋಜನೆಗಳನ್ನು ಕೂಡ ವಾಪಸ್ ಪಡೆಯುತ್ತಾರೆ. ಮಾನಗೆಟ್ಟವರು ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚುತ್ತಿದ್ದಾರೆ. ಜನರ ಸಂಕಷ್ಟವನ್ನು ಆಲಿಸದ, ಅಧಿಕಾರಕ್ಕಾಗಿ ಕುಚ್ಚಿಗೆ ಅಂಟಿಕೊಂಡಿರುವ ಇಂತಹ ಸರ್ಕಾರ ಬೇಕಾ? ಫೆವಿಕಾಲ್ ಹಾಕಿಕೊಂಡು ಕುರ್ಚಿಮೇಲೆ ಕುಳಿತಿದ್ದಾರೆ. ಮಾನ ಮರ್ಯಾದೆ ಎಂಬುದು ಇದ್ದರೆ ಸಿಎಂ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯಬೇಕು. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಬಿ.ಎಸ್.ವೈ.ಗೆ ಯಾವತ್ತೂ ಹಿಂಬಾಗಿಲಿನಿಂದಲೇ ಬಂದು ಅಭ್ಯಾಸ. ಮುಂಬಶಗಿಲಿನಿಂದ ಬರುವ ಅಭ್ಯಾಸವೇ ಇಲ್ಲ. ಹಿಂದೆ ಯಡಿಯೂರಪ್ಪ ನೇರವಾಗಿ ಲಂಚ ಪಡೆಯುತ್ತಿದ್ದರು. ಈಗ ಅವರ ಮಗ ಆರ್.ಟಿ.ಜಿ.ಎಸ್. ಮೂಲಕ ಲಂಚ ಪಡೆಯುತ್ತಿದ್ದಾರೆ. ಯಡಿಯೂರಪ್ಪ ಬಂದ ಮೇಲೆ ಸರ್ಕಾರದ ಖಜಾನೆ ಖಾಲಿಯಾಗಿದೆ. ಲೂಟಿ ಹೊಡೆದ ಮೇಲೆ ಖಜಾನೆ ಎಲ್ಲಿ ಇರುತ್ತೆ? ಸರ್ಕಾರದ ಹಣವನ್ನೇ ನುಂಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.