ಕೊರೊನಾ ಸೋಂಕು ಸಿಎಂ ಮನೆಗೂ ಕಾಲಿಟ್ಟಿದೆ. ಗೃಹ ಕಚೇರಿ ಕೃಷ್ಣಾ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಇದೀಗ ಸಿಎಂ ಯಡಿಯೂರಪ್ಪ ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಸೆಲ್ಫ್ ಕ್ವಾರಂಟೈನ್ ನಲ್ಲಿರಲು ನಿರ್ಧರಿಸಿದ್ದಾರೆ. ಕೃಷ್ಣಾ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವುದರಿಂದ ಇಂದಿನಿಂದ ಕನಿಷ್ಠ ಒಂದು ವಾರ ತಮ್ಮ ಮನೆಯಲ್ಲಿ ಉಳಿಯಲು ತೀರ್ಮಾನ ಮಾಡಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಸಿಎಂ ಕಚೇರಿ ಮಾಹಿತಿ ನೀಡಿದೆ.
ಹೌದು, ಮುಖ್ಯಮಂತ್ರಿಗಳ ಗೃಹ ಕಚೇರಿಯ ಟೆಲಿಫೋನ್ ಆಪರೇಟರ್, ಇಬ್ಬರು ಎಸ್ಕಾರ್ಟ್, ಧವಳಗಿರಿ ನಿವಾಸದಲ್ಲಿ ಅಡುಗೆ ಮಾಡುವವನಿಗೆ, ಒಬ್ಬ ಕಾರು ಚಾಲಕನಿಗೆ ಸೇರಿದಂತೆ ಸುಮಾರು 10 ಮಂದಿಗೆ ಕೊರೊನಾ ಸೋಂಕು ತಗುಲಿದೆಯಂತೆ. ಹೀಗಾಗಿ ಯಡಿಯೂರಪ್ಪ ಅವರಿಗೂ ಆತಂಕ ಪ್ರಾರಂಭವಾಗಿದೆ. ಇನ್ನು ಇಡೀ ಕಚೇರಿಯನ್ನು ಸ್ಯಾನಿಟೈಸ್ ಮಾಡಿಸಲಾಗುತ್ತಿದೆ.
ಇನ್ನು ಇದರ ಜೊತೆಗೆ ಯಡಿಯೂರಪ್ಪ ಪತ್ರಿಕಾ ಪ್ರಕಟಣೆ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕೃಷ್ಣಾ ಕಚೇರಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದರಿಂದ ಇಂದಿನಿಂದ ಕೆಲ ದಿನಗಳ ಕಾಲ ನಾನು ಮನೆಯಿಂದಲೇ ನನ್ನ ಕರ್ತವ್ಯಗಳನ್ನು ನಿರ್ವಹಿಸಲಿದ್ದೇನೆ. ವೀಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ, ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಮುನ್ನೆಚ್ಚರಿಕೆಯ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಸಾಮಾಜಿಕ ಅಂತರ ಹಾಗು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ ಎಂದಿದ್ದಾರೆ.