ಕಲಬುರಗಿ: ರಾಜ್ಯದ 23 ಜಿಲ್ಲೆಗಳಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರವಾಹದಿಂದಾಗಿ ಜನರು ಕಷ್ಟಪಡುತ್ತಿದ್ದಾರೆ. ರಾಜ್ಯ ಸರ್ಕಾರ ನೆರೆ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ಸಂದರ್ಭದಲ್ಲಿ ಇಲ್ಲಿಯೇ ಇದ್ದು ಪ್ರವಾಹ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು. ಜನರ ಸಂಕಷ್ಟ ಆಲಿಸಬೇಕು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಸಂದರ್ಭ ಹೋಗಲಿ ಮೇ ತಿಂಗಳಿಂದ ಜಿಲ್ಲೆಯ ಕಡೆ ತಲೆ ಹಾಕಿಲ್ಲ. ಇನ್ನು ಕಂದಾಯ ಸಚಿವರು ಪಿಕ್ ನಿಕ್ ಗೆ ಬಂದಂತೆ ಬಂದು ಹೋಗಿದ್ದಾರೆ ಎಂದು ಗುಡುಗಿದರು.
ಕಲಬುರಗಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿದರು. ಸಿಎಂ ಗೆ ಮೇಲಿಂದ ಅದೇನು ಕಾಣಿಸ್ತೋ ಗೊತ್ತಿಲ್ಲ. ಒಬ್ಬನೇ ಒಬ್ಬ ನೆರೆ ಸಂತ್ರಸ್ತರನ್ನು ಭೇಟಿಯಾಗಿ ಸಂಕಷ್ಟ ಆಲಿಸಿಲ್ಲ. ಮುಖ್ಯಮಂತ್ರಿಗಳು, ಮಂತ್ರಿಗಳು ಈ ರೀತಿ ನಡೆದುಕೊಂಡರೆ ಅಧಿಕಾರಿಗಳಿಗೆ ಲಂಗು ಲಗಾಮಿಲ್ಲದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.