ವಿಜಯಪುರ: ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿ ಬಗ್ಗೆ ಮತ್ತೆ ಅಸಮಾಧಾನ ಹೊರ ಹಾಕಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷರು, ರಾಜ್ಯ ಉಸ್ತುವಾರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಷ್ಟ್ರಾಧ್ಯಕ್ಷರು ಮಾತ್ರವಲ್ಲ ಅನುಮತಿ ನೀಡಿದರೆ ಕೇಂದ್ರದ ವರಿಷ್ಠರಿಗೂ ಹೇಳಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಶಾಸಕಾಂಗ ಪಕ್ಷದ ಸಭೆ ನಡೆಸುವಂತೆ ಈಗಾಗಲೇ ಪತ್ರ ಬರೆದಿದ್ದೇನೆ. ವಿಭಾಗ ಮಟ್ಟದ ಸಭೆ ಕರೆದರೆ 7-8 ಶಾಸಕರು ಮಾತ್ರ ಇರುತ್ತಾರೆ. ಮಾತನಾಡಲು ಭಯ ಪಡುತ್ತಾರೆ. ಆದರೆ ಶಾಸಕಾಂಗ ಪಕ್ಷದ ಸಭೆ ಕರೆದರೆ 117 ಶಾಸಕರು ಇರುತ್ತಾರೆ. ಸಮಸ್ಯೆ ಹೇಳಿಕೊಳ್ಳಲು ಧೈರ್ಯ ಬರುತ್ತದೆ. ಹಾಗಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಆಗ್ರಹಿಸಿದ್ದೇನೆ ಎಂದರು.
ಕೆಲ ಶಾಸಕರು ಸಿಎಂ ಭೇಟಿಗೆ ತೆರಳಿದ್ದರು. ಆದರೆ ಸಿಎಂ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ. ಮುಖ್ಯಮಂತ್ರಿಗಳು ಶಾಸಕರ ಭೇಟಿಗೂ ಸಿಗುತ್ತಿಲ್ಲ. ನಾನಂತು ಕಳೆದ 6 ತಿಂಗಳಿಂದ ಸಿಎಂ ಭೇಟಿಯನ್ನೇ ನಿಲ್ಲಿಸಿದ್ದೇನೆ. ಗೃಹ ಕಚೇರಿಗೂ ಕಾಲಿಟ್ಟಿಲ್ಲ. ಜನವರಿ 4 ಹಾಗೂ 5ರಂದು ನಡೆಯಲಿರುವ ಸಭೆಯಲ್ಲಿಯೂ ಸಿಎಂ ಕಾರ್ಯವೈಖರಿ ಪ್ರಸ್ತಾಪಿಸಲಿದ್ದೇನೆ. ಶಾಸಕಾಂಗ ಪಕ್ಷದ ಸಭೆ ನಡೆಸಲು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.