ಚಿಕ್ಕಮಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಅದಲು-ಬದಲಿನಿಂದ ಭುಗಿಲೆದ್ದಿದ್ದ ಸಚಿವರ ಅಸಮಾಧಾನ ಇನ್ನೂ ತಣ್ಣಗಾಗಿಲ್ಲ. ಇದರ ಬೆನ್ನಲ್ಲೇ ಈಗ ಕೆಲ ಅಸಮಾಧಾನಿತ ಸಚಿವ, ಶಾಸಕರು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ರೆಸಾರ್ಟ್ ನಲ್ಲಿ ಗೌಪ್ಯ ಸಭೆ ಸೇರಿರುವುದು ರಾಜ್ಯ ರಾಜಕೀಯದಲ್ಲಿ ಮತ್ತೊಂದು ತಲ್ಲಣಕ್ಕೆ ಕಾರಣವಾಗಬಹುದೇ ಎಂಬ ಕುತೂಹಲ ಮೂಡಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣರಾಗಿದ್ದ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅಸಮಾಧಾನಿತ ಸಚಿವರು ಚಿಕ್ಕಮಗಳೂರಿನ ರೆಸಾರ್ಟ್ ಒಂದರಲ್ಲಿ ಬೀಡು ಬಿಟ್ಟಿದ್ದು, ಗೌಪ್ಯ ಸಭೆ ನಡೆಸಿದ್ದಾರೆ. ಅತೃಪ್ತರ ಈ ಸಭೆ ಹಲವು ರಾಜಕೀಯ ಊಹಾಪೋಹಗಳಿಗೆ ಪುಷ್ಠಿ ನೀಡುತ್ತಿದೆ.
ಚಿಕ್ಕಮಗಳೂರು ಹೊರವಲಯದ ಸರಾಯ್ ರೆಸಾರ್ಟ್ ನಲ್ಲಿ ಸಚಿವರಾದ ಗೋಪಾಲಯ್ಯ, ಸಿ.ಪಿ.ಯೋಗೇಶ್ವರ್, ಶಾಸಕ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಹಲವರು ಸಚಿವ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ಅಸಮಾಧಾನಿತ ಸಚಿವ, ಶಾಸಕರು ರೆಸಾರ್ಟ್ ಸೇರಿರುವುದು ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೊಂದು ತಲೆನೋವು ತಂದೊಡ್ಡಿದೆ.