ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿಶ್ವನಾಥ್ ಅವರಿಗೆ ನಿರಾಸೆಯಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಕಾರಣಕರ್ತರಾಗಿದ್ದ ತಮಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದ ವಿಶ್ವನಾಥ್ ಟಿಕೆಟ್ ಕೈತಪ್ಪುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಲು ಮನವಿ ಮಾಡಿದ್ದರು.
ಇದೀಗ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಹೆಚ್. ವಿಶ್ವನಾಥ್, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ರಾಜಕಾರಣವನ್ನು ದಾಖಲಿಸಿರುವ ಏಳು ಪುಸ್ತಕಗಳು ನನ್ನ ಅಕೌಂಟ್ ನಲ್ಲಿವೆ. ಹೀಗಾಗಿ ಸಾಹಿತ್ಯ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರನ್ನಾಗಿ ತಮ್ಮನ್ನು ನಾಮನಿರ್ದೇಶನ ಮಾಡಲು ಯಾವುದೇ ತೊಡಕಿಲ್ಲ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರು ಮಾತಿಗೆ ತಪ್ಪುವುದಿಲ್ಲ ಎಂಬ ವಿಶ್ವಾಸ ನನಗಿದ್ದು, ನನ್ನ ಅನುಭವವನ್ನು ಬಳಸಿಕೊಳ್ಳಲು ಕೇಳಿಕೊಂಡಿದ್ದೇನೆ ಎಂದು ವಿಶ್ವನಾಥ್ ಹೇಳಿದರಲ್ಲದೆ ತಾವು ಮುಂಬೈ ಪ್ರವಾಸ ಕುರಿತು ‘ದಿ ಬಾಂಬೆ ಡೇಸ್’ ಎಂಬ ಪುಸ್ತಕ ರಚನೆಯಲ್ಲಿ ತೊಡಗಿದ್ದು, ಮೂರು ಭಾಷೆಯಲ್ಲಿ ರಿಲೀಸ್ ಆಗಲಿರುವ ಇದನ್ನು ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.