ಸಿಲಿಕಾನ್ ಸಿಟಿಯ ಮನೆ ಮಾಲೀಕರು ಹಾಗೂ ಬಾಡಿಗೆದಾರರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕಸದ ವಿಚಾರದಲ್ಲಿ ಪ್ರತಿ ಮನೆ, ವಾಣಿಜ್ಯ ಕಟ್ಟಡಗಳಿಂದಲೂ ಕಸದ ಶುಲ್ಕ ಸಂಗ್ರಹಕ್ಕೆ ಬಿಬಿಎಂಪಿ ಪ್ಲಾನ್ ಮಾಡಿತ್ತು. ಇದೀಗ, ಅಂತ ಯಾವುದೇ ಪ್ರಸ್ತಾವನೆ ಇಲ್ಲ ಅಂತ ಹೇಳೋ ಮೂಲಕ, ಸದ್ಯ ಇದ್ದ ಬಹುದೊಡ್ಡ ಆತಂಕಕ್ಕೆ ಬ್ರೇಕ್ ಬಿದ್ದಿದೆ.
ಹೌದು, ಬಿಬಿಎಂಪಿಯಿಂದ ಹೊಸದಾಗಿ ಕಸ ಶುಲ್ಕ ಸಂಗ್ರಹಕ್ಕೆ ಪ್ರಸ್ತಾವನೆಯನ್ನ ಇಡಲಾಗಿತ್ತು. ಮನೆ, ವಾಣಿಜ್ಯ ಕಟ್ಟಡಗಳು, ಕಲ್ಯಾಣ ಮಂಟಪಗಳಿಂದ ಕಸ ಸಂಗ್ರಹ ಶುಲ್ಕ ವಿಧಿಸಲು ಪ್ಲಾನ್ ಮಾಡಲಾಗಿತ್ತು. ಪ್ರತೀ ಮನೆಗಳಿಂದ ಕನಿಷ್ಠ 200 ರೂ. ಗಳಿಂದ ಆರಂಭವಾಗಿ, ಮನೆಯ ವಿಸ್ತೀರ್ಣದ ಆಧಾರದ ಮೇಲೆ ದರ ನಿಗದಿ ಮಾಡಲು ನಿರ್ಧರಿಸಿತ್ತು. ವಾಣಿಜ್ಯ ಕಟ್ಟಡ, ಕಲ್ಯಾಣ ಮಂಟಪಗಳಿಂದ ಸಾವಿರಾರು ರೂಪಾಯಿ ದರ ಸಂಗ್ರಹಿಸೋ ಚಿಂತನೆ ನಡೆಸಿತ್ತು.
ಆದ್ರೆ, ಈಗಾಗಲೇ ಬಿಬಿಎಂಪಿಯಿಂದ ನಗರದಲ್ಲಿರೋ ಪ್ರತಿ ಆಸ್ತಿಗಳಿಗೆ ತೆರಿಗೆ ಸಂಗ್ರಹ ಮಾಡುವಾಗಲೇ, ಕಸ ಸೇರಿದಂತೆ ಮೂರು ರೀತಿಯ ತೆರಿಗೆ ಸಂಗ್ರಹ ಮಾಡಲಾಗ್ತಿದ್ದು. ಹೊಸದಾಗಿ ಕಸದ ಹೆಸರಲ್ಲಿ ತೆರಿಗೆ ಸಂಗ್ರಹ ಸರಿಯಲ್ಲ ಅಂತ, ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಿಬಿಎಂಪಿಗೆ ಹಿಡಿ ಶಾಪ ಹಾಕಲು ಮುಂದಾಗಿದ್ರು. ಪ್ಲಾನ್ ಪ್ರಕಾರ ಬೆಸ್ಕಾಂ ಎಲೆಕ್ಟ್ರಿಕ್ ಬಿಲ್ ಜೊತೆಯಲ್ಲೇ, ಪ್ರತೀ ತಿಂಗಳು ಹಣ ಸಂಗ್ರಹ ಮಾಡೋ ಉದ್ದೇಶ ಬಿಬಿಎಂಪಿಯದ್ದಾಗಿತ್ತು. ಆದ್ರೀಗ, ಇಂತ ಪ್ರಸ್ತಾವನೆಯೇ ಇಲ್ಲ ಅಂತ, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರು ಮಿಷನ್ 2022ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಡಳಿತಾಧಿಕಾರಿ, ಸ್ಪತಃ ಹೇಳಿಕೆಯನ್ನ ನೀಡೋ ಮೂಲಕ. ಹೊಸ ಶುಲ್ಕ ವಿಚಾರ ಇಲ್ಲ ಅಂತ ಮಾಹಿತಿ ನೀಡಿದ್ದಾರೆ.
ಖಾಲಿ ಸೈಟುಗಳಲ್ಲಿ ಕಸ ಹಾಕೋದು, ಎಲ್ಲೆಂದ್ರಲ್ಲಿ ಕಸ ಹಾಕೋದ್ರಿಂದ ನೈರ್ಮಲ್ಯಕ್ಕೆ ಕಾರಣವಾಗ್ತಿದೆ. ಎಲ್ಲೆಂದ್ರಲ್ಲಿ ಕಸ ಹಾಕೋದ್ರಿಂದ ಸ್ವಚ್ಚತೆ ಇಲ್ಲದಂತಾಗಿದೆ. ಹೀಗಾಗಿ ಪ್ರತೀ ಮನೆಗೆ ಕಸ ಶುಲ್ಕ ಸಂಗ್ರಹ ಮಾಡಿ, ನಗರ ಸ್ವಚ್ಚವಾಗಿಡೋ ಪ್ಲಾನ್ ಮಾಡಲಾಗಿತ್ತು. ಇದೀಗ ಕಸಕ್ಕೆ ಪ್ರತೀ ಮನೆಗಳಿಂದ ಶುಲ್ಕ ಸಂಗ್ರಹಿಸೋ ವಿಚಾರವನ್ನ ಕೈ ಬಿಡಲಾಗಿದ್ದು, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ದೊಡ್ಡ ಆರ್ಥಿಕ ಹೊಡೆತ ತಪ್ಪಿದಂತಾಗಿರೋದು ಸುಳ್ಳಲ್ಲ.