ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಆರಂಭದಲ್ಲಿ ದಿನಕ್ಕೆ 30 – 40 ಪ್ರಕರಣಗಳು ವರದಿಯಾಗುತ್ತಿದ್ದು, ಇದೀಗ ಅದು 400ರ ಗಡಿ ದಾಟಿದೆ. ಶನಿವಾರ ಒಂದೇ ದಿನ ರಾಜ್ಯದಲ್ಲಿ 416 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದರ ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಲಾಕ್ಡೌನ್ ಸಡಿಲಿಕೆ ಬಳಿಕ ಬಹುತೇಕ ಸಾರ್ವಜನಿಕರು ಕೊರೊನಾ ಇದೆ ಎಂಬುದನ್ನೇ ಮರೆತಂತಿದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದ್ದರೂ ಸಹ ಬಹಳಷ್ಟು ಮಂದಿ ಇದನ್ನು ಪಾಲಿಸುತ್ತಿಲ್ಲ. ಈ ಮೂಲಕ ಸ್ವತಃ ತಮಗೆ ತೊಂದರೆ ತಂದುಕೊಳ್ಳುತ್ತಿರುವುದಲ್ಲದೆ ಇತರರಿಗೂ ಕಂಟಕಪ್ರಾಯರಾಗುತ್ತಿದ್ದಾರೆ.
ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೊರ ವಲಯಕ್ಕೂ ವ್ಯಾಪಿಸುತ್ತಿದೆ ಎನ್ನಲಾಗಿದ್ದು, ಹೀಗಾಗಿಯೇ ಸಚಿವ ಆರ್. ಅಶೋಕ್, ಅವಶ್ಯಕತೆ ಇದ್ದರೆ ಮಾತ್ರ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಹೊರಬನ್ನಿ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳು ಕಠಿಣವಾಗಿರಲಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಜೀವನೋಪಾಯಕ್ಕಾಗಿ ಹೊರ ಹೋಗುವುದು ಅನಿವಾರ್ಯವಾಗಿದೆ. ಅಂತಹ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಪದೇ ಪದೇ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಅತಿ ಮುಖ್ಯವಾಗಿದೆ. ಇಲ್ಲವಾದರೆ ಕೊರೊನಾ ಮಹಾಮಾರಿ ವಕ್ಕರಿಸಿಕೊಳ್ಳುವುದು ಖಚಿತ. ಈಗಲಾದರೂ ಸಾರ್ವಜನಿಕರು ಎಚ್ಚೆತ್ತು ನಿಯಮಾವಳಿಗಳನ್ನು ಪಾಲಿಸುವುದು ಅವಶ್ಯಕವಾಗಿದೆ.