ಬೆಂಗಳೂರು: ರಾಜ್ಯ ಸರ್ಕಾರ ರೈತರ ಪರವಾಗಿದೆ. ರೈತರ ಅನುಕೂಲಕ್ಕಾಗಿಯೇ ಭೂ ಸುಧಾರಣೆ, ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ರೈತರು ಕರ್ನಾಟಕ ಬಂದ್ ಪ್ರತಿಭಟನೆ ಕೈ ಬಿಡಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ರೈತರ ಹಿತದೃಷ್ಟಿಯಿಂದ ಕೃಷಿ ಸಂಬಂಧಿತ ಮಸೂದೆ ಮಂಡಿಸಲಾಗಿದೆ. ಈ ಮಸೂದೆ ಜಾರಿಯಿಂದ ರೈತರಿಗೆ ಯಾವುದೇ ರೀತಿಯ ತೊಂದೆಯಾಗದು. ವಿಪಕ್ಷಗಳು ರೈತರಲ್ಲಿ ಅನಗತ್ಯವಾದ ಗೊಂದಲವನ್ನುಂಟು ಮಾಡುವ ಕೆಲಸ ಮಾಡಿವೆ. ಮೊನ್ನೆ ಹಲವು ರೈತ ಮುಖಂಡರ ಜೊತೆ ಸಭೆ ನಡೆಸಿ, ಮಾತನಾಡಲಾಗಿದೆ. ಯಾರೂ ಕೂಡ ಎಪಿಎಂಸಿ ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿಲ್ಲ. ರೈತರು ಗೊಂದಲಕ್ಕೀಡಾಗಿ ಪ್ರತಿಭಟನೆಗೆ ಮುಂದಾಗಿರುವುದು ಸರಿಯಲ್ಲ. ನಾಳಿನ ಕರ್ನಾಟಕ ಬಂದ್ ವಾಪಸ್ ಪಡೆಯಬೇಕು ಎಂದರು.
ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ರೈತ ಸಂಘಟನೆಗಳ ಕರ್ನಾಟಕ ಬಂದ್ ಗೆ ಸರ್ಕಾರ ಬೆಂಬಲ ನೀಡುವುದಿಲ್ಲ, ಬಂದ್ ಗೆ ಯಾವುದೇ ಅನುಮತಿಯಿಲ್ಲ. ಬಂದ್ ಹೆಸರಲ್ಲಿ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಮುಂದಾದರೆ, ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟು ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.