ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಬಗ್ಗೆ ಸದನದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು ಮತಕ್ಕೆ ಹಾಕುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಇದನ್ನು ಒಪ್ಪದ ಸ್ಪೀಕರ್ ಕಾಗೇರಿ ಧ್ವನಿಮತಕ್ಕೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿ ವಿಚಾರವಾಗಿ ಮಾತನಾಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊರೊನಾ ಸೋಂಕಿನಿಂದಾಗಿ ಹಲವು ಸದಸ್ಯರು ಸದನಕ್ಕೆ ಬಂದಿಲ್ಲ. ಸೋಂಕಿತರಿಗೆ ಪಿಪಿಇ ಕಿಟ್ ಧರಿಸಿ ಕೂಡ ಸದನಕ್ಕೆ ಬರಲು ಅವಕಾಶ ನೀಡುವುದಿಲ್ಲ. ರಾಜಕೀಯಕ್ಕಿಂತ ಮನುಷತ್ವ ಹಾಗೂ ಜೀವನ ಮುಖ್ಯ ಎಂಬುದನ್ನು ವಿಪಕ್ಷಗಳ ಸದಸ್ಯರು ಹಾಗೂ ಆಡಳಿತ ಪಕ್ಷಗಳ ಸದಸ್ಯರು ಅರ್ಥಮಾಡಿಕೊಳ್ಳಬೇಕು. ಹೀಗಾಗಿ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಬದಲಾಗಿ ಧ್ವನಿಮತಕ್ಕೆ ಹಾಕಲು ಅವಕಾಶ ನೀಡುವುದಾಗಿ ತಿಳಿಸಿದರು.
ಇದಕ್ಕೆ ಒಪ್ಪಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಮಗೂ ಸಾಮಾಜಿಕ ಜವಾಬ್ದಾರಿ ಇದೆ. ಮಾನವೀಯತೆ ದೃಷ್ಟಿಯಿಂದ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವನ್ನು ಮತ ವಿಭಜನೆ ಬದಲಾಗಿ ಧ್ವನಿ ಮತಕ್ಕೆ ಹಾಕಲು ಒಪ್ಪುವುದಾಗಿ ತಿಳಿಸಿದರು.