ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವವರೆಗೂ ಹೋರಾಟ ಹಿಂಪಡೆಯುವ ಪ್ರಶ್ನೆ ಇಲ್ಲ. ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘದ ಅಧ್ಯಕ್ಷ ಹಾಗೂ ಸಿಐಟಿಯು ಕಾರ್ಯದರ್ಶಿ ಆನಂದ್ ತಿಳಿಸಿದ್ದಾರೆ.
ಸಾರಿಗೆ ಸಿಬ್ಬಂದಿಗಳ ಹಲವು ಬೇಡಿಕೆ ಈಡೇರಿಸಲು ಸರ್ಕಾರ ಭರವಸೆ ನೀಡಿತ್ತು. ಸಮಿತಿ ರಚನೆಗೂ ಸರ್ಕಾರ ಮುಂದಾಗಿದೆ ಎಂಬ ನಿಟ್ಟಿನಲ್ಲಿ ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಪಟ್ಟು ಬಿಡದ ಸಾರಿಗೆ ನೌಕರರು ಮತ್ತೆ ತಮ್ಮ ಹೋರಾಟ, ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮುಷ್ಕರ ಮುಂದುವರೆಸುವ ಬಗ್ಗೆ ಘೋಷಿಸುವಂತೆ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಿರತ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಆಗ್ರಹಿಸಿದ್ದಾರೆ.
ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರು 10 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೆವು. ಅದರಲ್ಲಿ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಹಾಗಾಗಿ ಸರ್ಕಾರದ ವತಿಯಿಂದ ಓರ್ವ ಸಚಿವರು ಪ್ರತಿಭಟನಾ ಸ್ಥಳದ ವೇದಿಕೆಗೆ ಬಂದು ಭರವಸೆ ಈಡೇರಿಸುವ ಬಗ್ಗೆ ಆದೇಶದ ಪ್ರತಿ ನೀಡಲಿ. ಅಲ್ಲಿಯವರೆಗೂ ಸಾರಿಗೆ ನೌಕರರ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.