
ಕೊರೊನಾ ಮಹಾಮಾರಿಯಿಂದಾಗಿ ಮಹೋತ್ಸವಗಳು, ಹಬ್ಬಗಳಿಗೆ ಬ್ರೇಕ್ ಬಿದ್ದಿದೆ. ಅದರಲ್ಲೂ ಕಳೆದ ಎರಡ್ಮೂರು ದಿನಗಳಿಂದ ಕೊರೊನಾ ರೂಪಾಂತರಗೊಂಡಿರುವ ವೈರಸ್ ಭೀತಿಯೂ ಹೆಚ್ಚಾಗಿದೆ. ಹೀಗಾಗಿ ಮಹೋತ್ಸವಗಳು, ಹಬ್ಬಗಳಿಗೆ ಅವಕಾಶ ನೀಡುತ್ತಿಲ್ಲ. ಇತ್ತ ಘಾಟಿ ಸುಬ್ರಮಣ್ಯಸ್ವಾಮಿ ರಥೋತ್ಸವವನ್ನು ಸರಳವಾಗಿ ಆಚರಿಸೋದಕ್ಕೆ ನಿರ್ಧಾರ ಮಾಡಲಾಗಿದೆ.
ಹೌದು, ಪ್ರತಿ ವರ್ಷ ಅದ್ಧೂರಿಯಿಂದ ನಡೆಸಲಾಗುತ್ತಿದ್ದ ಘಾಟಿ ಸುಬ್ರಮಣ್ಯಸ್ವಾಮಿ ರಥೋತ್ಸವ ಈ ಬಾರಿ ಸರಳವಾಗಿ ನಡೆಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಜನವರಿ 19 ರಂದು ಬ್ರಹ್ಮರಥೋತ್ಸವವನ್ನು ದೇವಾಲಯದ ಒಳಗಡೆಯೇ ಸರಳವಾಗಿ ಆಚರಣೆ ಮಾಡಲಾಗುತ್ತದೆ. ದೇವಸ್ಥಾನದ ಹೊರಗಡೆ ರಥೋತ್ಸವ ನಡೆದರೆ ಹೆಚ್ಚಿನ ಜನ ಸೇರುತ್ತಾರೆ ಅಲ್ಲಿ ಕೊರೊನಾ ಹರಡುವ ಸಾಧ್ಯತೆ ಇರುತ್ತೆ ಎಂಬ ಉದ್ದೇಶದಿಂದ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.
ಇನ್ನು ಈ ರಥೋತ್ಸವದಲ್ಲಿ ದನಗಳ ಜಾತ್ರೆಯೂ ನಡೆಯುತ್ತದೆ. ರಥೋತ್ಸವಕ್ಕೂ ಮುನ್ನವೇ ದನಗಳ ಜಾತ್ರೆ ಪ್ರಾರಂಭವಾಗುತ್ತಿತ್ತು. ಅದ್ಧೂರಿಯಾಗಿ ನಡೆಯುತ್ತಿದ್ದ ಈ ದನಗಳ ಜಾತ್ರೆಗೂ ಕೊರೊನಾ ಎಫೆಕ್ಟ್ ತಟ್ಟಿದೆ. ಅದನ್ನೂ ಈ ಬಾರಿ ಸರಳವಾಗಿ ಆಚರಣೆ ಮಾಡಲು ಅನುಮತಿ ನೀಡಲಾಗಿದೆ. ಡಿಸೆಂಬರ್ 30 ರಿಂದ ದನಗಳ ಜಾತ್ರೆ ಆರಂಭವಾಗಲಿದೆ. ಇಲ್ಲಿಯೂ ಹೆಚ್ಚಿನ ಜನ ಸೇರುವ ಸಾಧ್ಯತೆ ಇರೋದ್ರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ.