ಬೆಂಗಳೂರು: ವಿಧಾನಮಂಡಲ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದೆ. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಒಂದು ರಾಷ್ಟ್ರ, ಒಂದು ಚುನಾವಣೆ ಕುರುತು ಚರ್ಚೆ ಆರಂಭವಾಯಿತು. ಚರ್ಚೆಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಚರ್ಚೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್ ಶರ್ಟ್ ಬಿಚ್ಚಿ ಪ್ರತಿಭಟಿಸಿದರು. ಶಾಸಕರ ವರ್ತನೆಗೆ ಕೆಂಡಾಮಂಡಲರಾದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂತಹ ವರ್ತನೆ ಸಹಿಸುವುದಿಲ್ಲ ಎಂದರು.
ಸದನದಲ್ಲಿ ಈ ರೀತಿ ಶರ್ಟ್ ಬಿಚ್ಚಿ ಪ್ರತಿಭಟಿಸುವುದು ಶೋಭೆಯಲ್ಲ. ಅಶಿಸ್ತಿನಿಂದ ನಡೆದುಕೊಂಡರೆ ಸದನದಿಂದ ಹೊರಹಾಕಬೇಕಾಗುತ್ತದೆ. ಇಂತಹ ವರ್ತನೆ ಕ್ಷೇತ್ರದ ಜನತೆಗೆ ನೀವು ತೋರುವ ಅಗೌರವ ಎಂದು ಕಿಡಿಕಾರಿದರು. ಸದನದಲ್ಲಿ ಗದ್ದಲ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪ 15 ನಿಮಿಷಗಳ ಕಾಲ ಮುಂದೂಡಲಾಯಿತು.