ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ತಾವು ನೇಮಕಗೊಂಡಿರುವುದು ಅತ್ಯಂತ ಸಂತಸದ ವಿಚಾರ. ಪಕ್ಷ ಸಂಘಟನೆಗಾಗಿ ನಾನು ಸಚಿವ ಸ್ಥಾನ ಬಿಡಲು ಸಿದ್ಧನಿದ್ದೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ. ರವಿ, ನನ್ನದೇನಿದ್ದರೂ ಪಕ್ಷ ಸಂಘಟನೆ ಮಾತ್ರ. ಸಚಿವ ಸ್ಥಾನ ಬಿಡಲು ನಾನು ಸಿದ್ಧನಿದ್ದೇನೆ. ಪಕ್ಷ ಸೂಚಿಸಿದ ತಕ್ಷಣ ನಾನು ಸಚಿವ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದು ಹೇಳಿದ್ದಾರೆ.
ತುಂಬಾ ತಳಮಟ್ಟದಿಂದ ಇಂದು ಈ ಜವಾಬ್ದಾರಿಯುತ ಸ್ಥಾನಕ್ಕೆ ಬಂದಿದ್ದೇನೆ. ಸಾಧ್ಯವಾದ ಮಟ್ಟಿಗೆ ಪಕ್ಷ ಕಟ್ಟುವ ಪ್ರಯತ್ನ ಮಾಡುತ್ತೇನೆ. ಹಿಂದೆ ಸಂಘಟನೆ, ನಾಯಕತ್ವ, ಜನಸಂಘದ ತತ್ವಗಳ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಈಗ ಹಲವು ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿದ್ದೇವೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಪ್ರಧಾನಿ ನರೇಂದ್ರ ಮೋದಿ ಇರುವಾಗ ನಮಗೆ ಕಷ್ಟವಾಗಲ್ಲ ಎಂದು ಹೇಳಿದರು.
ಇನ್ನು ಎಪಿಎಂಸಿ ತಿದ್ದುಪಡಿ ಕಾಯಿದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ರಾಜಕೀಯ ಪ್ರೇರಿತವಾಗಿದೆ. ಕಾಯಿದೆಯಿಂದ ರೈತರಿಗೆ ಅನುಕೂಲವಾಗಲಿದೆ. 10 ಜನ ವ್ಯಾಪಾರಿಗಳು ಬಂದು ರೈತರ ಬೆಳೆ ಖರೀದಿ ಮಾಡಿದರೆ ಅದರಿಂದ ರೈತರಿಗೆ ಲಾಭ. ಅಲ್ಲದೇ ನೇರವಾಗಿ ವ್ಯಾಪಾರಿಗಳು ರೈತರ ಮನೆಗೆ ಬಂದು ಉತ್ಪನ್ನಗಳ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.