ಬಳ್ಳಾರಿ: ವಿಜಯನಗರ ನೂತನ ಜಿಲ್ಲೆಗೆ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸಚಿವ ಆನಂದ್ ಸಿಂಗ್, ಸರ್ಕಾರದ ಈ ನಿರ್ಧಾರಕ್ಕೆ ನಾನು ರೂವಾರಿಯಲ್ಲ, ನನ್ನ ವೈಯಕ್ತಿಕ ಪ್ರತಿಷ್ಠೆಯೇನೂ ಇಲ್ಲ ಎಂದು ಹೇಳಿದ್ದಾರೆ.
ವಿಜಯನಗರ ಜಿಲ್ಲೆಯಾಗಬೇಕು ಎಂಬುದು ಈ ಭಾಗದ ಜನರ ಹಲವು ದಿನಗಳ ಬೇಡಿಕೆ. ಅಭಿವೃದ್ಧಿ ದೃಷ್ಟಿಯಿಂದ ವಿಜಯನಗರ ಜಿಲ್ಲೆಯಾಗಬೇಕು ಎಂದು ಒತ್ತಾಯಿಸಿದ್ದೆವು. ಇದರಲ್ಲಿ ನನ್ನ ಹಠಮಾರಿತನವಿಲ್ಲ. ವಿರೂಪಾಕ್ಷನ ಆಶಿರ್ವಾದದಿಂದ ಜಿಲ್ಲೆಯಾಗುತ್ತೆ ಎಂದಿದ್ದೆ. ಅದರಂತೆ ಈಗ ನೂತನ ಜಿಲ್ಲೆಗೆ ಒಪ್ಪಿಗೆ ಸಿಕ್ಕಿದೆ. ವಿಜಯನಗರ ಹೆಸರು ಉಳಿಯಲು ಸಚಿವ ಸ್ಥಾನ ತ್ಯಾಗಕ್ಕೂ ನಾನು ಸಿದ್ಧ. ಸಂಪುಟ ವಿಸ್ತರಣೆ ಕೂಡ ಆಗುತ್ತಿದೆ. ನಾನು ಈಗಲೇ ರಾಜೀನಾಮೆ ಪತ್ರವನ್ನು ಸಿಎಂ ಯಡಿಯೂರಪ್ಪನವರಿಗೆ ನೀಡಿ ಶಾಸಕನಾಗಿ ಮುಂದುವರೆಯಲು ಸಿದ್ಧನಿದ್ದೇನೆ. ನನಗೆ ಜಿಲ್ಲೆ ಜನತೆಯ ಅಭಿವೃದ್ಧಿ ಮುಖ್ಯ ಎಂದರು.
ಬಳ್ಳಾರಿ ಹಾಗೂ ವಿಜಯನಗರ ಎರಡೂ ಜಿಲ್ಲೆಗಳ ಜನ ಅಣ್ಣ-ತಮ್ಮಂದಿರಂತೆ ಬಾಳೋಣ. ಸೂರ್ಯ- ಚಂದ್ರ ಇರುವವರೆಗೂ ಸಿಎಂ ಯಡಿಯೂರಪ್ಪ ಅವರ ಹೆಸರನ್ನು ಚಿರಸ್ಥಾಯಿ ಮಾಡೋಣ ಎಂದು ಹೇಳಿದರು.