ರಾಜ್ಯಸಭಾ ಚುನಾವಣೆಯಲ್ಲಿ ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಲು ವಿಫಲರಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ವಿಧಾನಪರಿಷತ್ ಚುನಾವಣೆಯಲ್ಲಿ ಯಶಸ್ವಿಯಾಗಿದ್ದಾರೆ. ಕೊಟ್ಟ ಮಾತಿನಂತೆ ತಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿದ್ದ ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅವರಿಗೆ ಯಡಿಯೂರಪ್ಪ ಟಿಕೆಟ್ ಕೊಡಿಸಿದ್ದು, ಇದರ ಬೆನ್ನಲ್ಲೇ ಈಗ ಸಚಿವ ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಿವೆ.
ಮೂಲಗಳ ಪ್ರಕಾರ ಜೂನ್ 22ರಿಂದ ಆಷಾಢ ಆರಂಭವಾಗಲಿದ್ದು, ಇದು ಮುಗಿದ ಬಳಿಕ ಅಂದರೆ ಜುಲೈ ಅಂತ್ಯಕ್ಕೆ ತಮ್ಮ ಸಂಪುಟವನ್ನು ವಿಸ್ತರಣೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪನವರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದ್ದು, ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಜೊತೆಗೆ ಖಾಲಿ ಉಳಿದಿರುವ ಸ್ಥಾನಗಳನ್ನು ಭರ್ತಿ ಮಾಡಲು ಚಿಂತನೆ ನಡೆಸಿದ್ದಾರೆನ್ನಲಾಗಿದೆ.
ಸಂಪುಟ ಪುನಾರಚನೆಯ ಮಾತುಗಳೂ ಸಹ ಕೇಳಿ ಬರುತ್ತಿದ್ದು, ಹಾಲಿ ಸಚಿವರ ಪೈಕಿ ಕೆಲವರನ್ನು ಕೈಬಿಟ್ಟು ಆ ಸ್ಥಾನಗಳಿಗೆ ಹೊಸಬರಿಗೆ ಮಣೆ ಹಾಕುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಆದರೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಬಿಜೆಪಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು, ಹೀಗಾಗಿ ಕಾದುನೋಡಬೇಕಿದೆ.