ನವದೆಹಲಿ: ಉಪಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಚಿವಾಕಾಂಕ್ಷಿಗಳ ಲಾಬಿ ಆರಂಭವಾಗಿದೆ. ಈ ನಡುವೆ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸಚಿವ ಸ್ಥಾನಕ್ಕಾಗಿ ಕಾಳಿ ದೇವಿಯ ಮೊರೆ ಹೋಗಿದ್ದಾರೆ.
ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ದೆಹಲಿಗೆ ತೆರಳಿರುವ ಹೆಚ್.ವಿಶ್ವನಾಥ್, ಅಲ್ಲಿಂದ ನೇರವಾಗಿ ಕೋಲ್ಕತ್ತಾಗೆ ತೆರಳಿದ್ದು, ಹೂಗ್ಲಿ ನದಿಯ ದಂಡೆ ದಕ್ಷಿಣೇಶ್ವರದಲ್ಲಿರುವ ಕಾಳಿ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ಬಾರಿಯಾದರೂ ತನಗೆ ಸಚಿವ ಸ್ಥಾನ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.
ಇನ್ನು ಹೆಚ್.ವಿಶ್ವನಾಥ್ ಕಾಳಿ ಮಂದಿರಕ್ಕೆ ತೆರಳಿರುವುದು ಇದೇ ಮೊದಲಲ್ಲ. ಈ ಹಿಂದೆ ಜೆಡಿಎಸ್ ನಲ್ಲಿದ್ದಾಗ ರಾಜೀನಾಮೆ ನೀಡುವುದಕ್ಕೂ ಮುನ್ನ ಅವರು ಕಾಳಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವುದರಿಂದ ವಿಶ್ವನಾಥ್ ಮತ್ತೆ ಕಾಳಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ನಾಳೆ ಬಿಜೆಪಿ ವರಿಷ್ಠರನ್ನು ಭೇಟಿಯಾಗಲಿರುವ ಹೆಚ್.ವಿಶ್ವನಾಥ್ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲಿದ್ದಾರೆ.