ಬೆಂಗಳೂರು: ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಎರಡೂ ಒಂದೇ ಹಾಗಾಗಿ ಒಬ್ಬರಿಗೇ ಈ ಜವಾಬ್ದಾರಿ ನೀಡಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಈ ಎರಡೂ ಖಾತೆಯನ್ನು ಒಬ್ಬರೇ ಸಚಿವರು ನಿರ್ವಹಿಸುತ್ತಾರೆ ಎಂದು ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಭೇಟಿ ಬಳಿಕ ಮಾತನಾಡಿದ ಸುಧಾಕರ್, ತಾಂತ್ರಿಕ ಸಮಸ್ಯೆಯಿಂದಾಗಿ ಸ್ಥಳೀಯ ಮಟ್ಟದಲ್ಲಿ ಸಮನ್ವಯತೆ ಕೊರತೆಯಿತ್ತು. ಅದೆಲ್ಲವನ್ನು ಗಮನಿಸಿ ಇಂದು ಆರೋಗ್ಯ ಹಾಗೂ ವೈದ್ಯಕೀಯ ಎರಡನ್ನೂ ಒಬ್ಬರಿಗೇ ವಹಿಸಿದ್ದಾರೆ ಎಂದು ಹೇಳುವ ಮೂಲಕ ಸಚಿವ ಶ್ರೀರಾಮುಲುಗೆ ಟಾಂಗ್ ನೀಡಿದರು.
ಸಮಾಜ ಕಲ್ಯಾಣ ಶ್ರೀರಾಮುಲುಗೆ ದೊಡ್ಡ ಖಾತೆ. ಆರೋಗ್ಯ ಹಾಗೂ ವೈದ್ಯಕೀಯ ಎರಡೂ ಒಂದೇ. ನಮಗೆ ಈ ರಾಜ್ಯದ ಆರೋಗ್ಯ ಮುಖ್ಯ. ಕೊರೊನಾ ವಿಚಾರದಲ್ಲಿ ಸ್ಥಳೀಯವಾಗಿ ಜಿಲ್ಲಾ ಮಟದಲ್ಲಿ ಸಮನ್ವಯತೆ ಕೊರತೆಯಿತ್ತು. ಜಿಲ್ಲೆಗಳಲ್ಲಿ ಡಿಹೆಚ್ ಒ ಆರೋಗ್ಯ ಸಚಿವರಿಗೆ ವರದಿ ನೀಡುತ್ತಿದ್ದರೆ, ವೈದ್ಯಕೀಯ ಕಾಲೇಜು ನಿರ್ದೇಶಕರು ವೈದ್ಯಕೀಯ ಶಿಕ್ಷಣ ಸಚಿವರಿಗೆ ರಿಪೋರ್ಟ್ ನೀಡಬೇಕಿತ್ತು. ಇದರಿಂದ ಸ್ವಲ್ಪ ಸಮನ್ವಯತೆ ಸಮಸ್ಯೆಯಾಗುತ್ತಿತ್ತು. ಹಾಗಾಗಿ ಇದೆಲ್ಲವನ್ನು ಗಮನಿಸಿ ವೈದ್ಯಕೀಯ ಶಿಕ್ಷಣದ ಜೊತೆಗೆ ನನಗೆ ಆರೋಗ್ಯ ಇಲಾಖೆ ಖಾತೆ ನೀಡಿದ್ದಾರೆ ಎಂದು ಹೇಳಿದರು.